ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಯೋಜನಾ ವರದಿ ತಯಾರಿಸಿ: ಸಚಿವ ಶಿವರಾಜ ತಂಗಡಗಿ

ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಯೋಜನಾ ವರದಿ ತಯಾರಿಸಿ: ಸಚಿವ ಶಿವರಾಜ ತಂಗಡಗಿ Prepare a planning report to support the development of the district: Minister Shivaraj Thangadagi

ಲೋಕದರ್ಶನ ವರದಿ 

ಕೊಪ್ಪಳ  17: ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ, ಅಗತ್ಯ ಅನುದಾನದ ಬೇಡಿಕೆ, ವಿವರವಾದ ಮಾಹಿತಿಯೊಂದಿಗೆ ಯೋಜನಾ ವರದಿ ತಯಾರಿಸಿ ಸಲ್ಲಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾದ ಶಿವರಾಜ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಮಂಗಳವಾರದಂದು ಜಿಲ್ಲಾ ಪಂಚಾಯತಿಯ ಜೆ.ಎಚ್‌.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರತಿಯೊಂದು ಗ್ರಾಮ ಪಂಚಾಯತಿಗಳು ಪ್ರತಿ ಗ್ರಾಮಗಳಲ್ಲಿ ಗ್ರಾಮಸಭೆಗಳನ್ನು ನಡೆಸಿ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಅವಶ್ಯಕವಿರುವ ಕಾಮಗಾರಿ, ಕಾರ್ಯಕ್ರಮಗಳನ್ನೊಳಗೊಂಡ ಕರಡು ಅಭಿವೃದ್ಧಿ ಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆದು ತಾಲ್ಲೂಕು ಪಂಚಾಯತ್‌ಗಳಿಗೆ ಸಲ್ಲಿಸಬೇಕು. ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳು ವಾರ್ಡ್‌ಗಳಲ್ಲಿ ವಾರ್ಡ್‌ ಸಭೆಗಳನ್ನು ನಡೆಸಿ ವಾರ್ಡ್‌ಗಳ ಮೂಲಭೂತ ಸೌಕರ್ಯಗಳಿಗೆ ಅವಶ್ಯವಿರುವ ಕಾಮಗಾರಿ, ಕಾರ್ಯಕ್ರಮಗಳನ್ನೊಳಗೊಂಡ ಕರಡು ಅಭಿವೃದ್ಧಿ ಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆದು ಆಯಾ ತಾಲ್ಲೂಕು ಪಂಚಾಯತ್‌ಗಳಿಗೆ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಸಲ್ಲಿಸಬೇಕು. ಗ್ರಾಮ ಪಂಚಾಯತಿಗಳಿಂದ ಸ್ವೀಕರಿಸಿದ ಪ್ರಸ್ತಾವನೆಗಳನ್ನು ಕ್ರೋಢೀಕರಿಸಿ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ, ತಾಲ್ಲೂಕು ಪಂಚಾಯತಿಗಳು ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಂಡ ನಂತರ ಸಂಬಂಧಪಟ್ಟ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ತಾಲ್ಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಸಭೆಗೆ ಮಂಡಿಸಿ, ಅನುಮೋದನೆ ಪಡೆದು ನಂತರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಯೋಜನಾ ಸಮಿತಿಗೆ ಅನುಮೋದನೆಗೆ ಸಲ್ಲಿಸಬೇಕು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳ ವರದಿಯನ್ನು ಸಲ್ಲಿಸಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದ ಯೋಜನೆಗಳನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿಗೆ ಸಲ್ಲಿಸಬೇಕು ಎಂದು ಅವರು ಹೇಳಿದರು. 

ಜಿಲ್ಲಾ ಯೋಜನಾ ಸಮಿತಿಯು ಅಭಿವೃದ್ಧಿ ಯೋಜನಾ ಕರಡನ್ನು ತಯಾರಿಸುವಾಗ ಪ್ರಾದೇಶಿಕ ಯೋಜನೆ ನೀರಿನ ಹಂಚಿಕೆ ಮತ್ತು ಇತರೆ ಭೌತಿಕ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ ಮೂಲ ಪರಿಕರಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಇವುಗಳನ್ನು ಒಳಗೊಂಡಂತೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಣ ಸಮಾನ ಹಿತಾಸಕ್ತಿ ವಿಷಯಗಳು, ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕಾರ್ಯಕ್ರಮಗಳು ಪ್ರತಿರೂಪಗಳಿರದಂತೆ ಗಮನ ಹರಿಸಬೇಕು. ಸ್ಥಳೀಯ ಸಂಪನ್ಮೂಲ, ಸರ್ಕಾರದ ಲಭ್ಯವಿರುವ ಹಣಕಾಸು ಸಂಪನ್ಮೂಲ ಅಥವಾ ಇತರೆ ಸಂಪನ್ಮೂಲಗಳ ವ್ಯಾಪ್ತಿ ಮತ್ತು ಸ್ವರೂಪಗಳ ಬಗ್ಗೆ ಗಮನ ಹರಿಸಬೇಕು.(ಕೇಂದ್ರ ಹಾಗೂ ರಾಜ್ಯ ವಲಯದ ಯೋಜನೆಗಳನ್ನು ಸೇರಿಸಿಕೊಳ್ಳಬಹುದು). ಸ್ಥಳೀಯ ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯಗಳ ಬೆಳವಣಿಗೆ, ಅಭಿವೃದ್ಧಿ ಸಂಭವನೀಯ ಬೆಳವಣಿಗೆ(ಆರೋಗ್ಯ, ಶಿಕ್ಷಣ, ನೀರು ಮತ್ತು ನೈರ್ಮಲ್ಯ, ಮಹಿಳಾ ಮತ್ತು ಮಕ್ಕಳ ಸಶಕ್ತೀಕರಣ), ಸಾಮಾಜಿಕ ನ್ಯಾಯಗಳಿಗೆ ಆದ್ಯತೆ ನೀಡಬೇಕು. ಜಿಲ್ಲಾ ಯೋಜನಾ ಸಮಿತಿ ಹಾಗೂ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿಗಳು, ಪುರಸಭೆಗಳು, ನಗರಸಭೆ ಮತ್ತು ಕಾರ​‍್ೋರೇಷನ್‌ಗಳಿಂದ ವಾರ್ಷಿಕವಾಗಿ ವಂತಿಗೆಯನ್ನು ಸಂಗ್ರಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಮಂಜುನಾಥ ಡಿ. ಅವರು ಜಿಲ್ಲಾ ಯೋಜನಾ ಸಮಿತಿಯ ಕಾರ್ಯವಿಧಾನಗಳು, ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಮತ್ತು ಜಿಲ್ಲಾ ಮಾನವ ಅಭಿವೃದ್ಧಿ ವರದಿ-2031 ರ ತಯಾರಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣಮೂರ್ತಿ,

ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ಕಲ್ಲಭಾಗಿಲಮಠ ಸಿದ್ದೇಶ ಕುಮಾರ, ಈಶಪ್ಪ ಅಮರ​‍್ಪ ಇಟ್ಟಂಗಿ, ಸೋಮಶೇಖರ​‍್ಪ ವಿರುಪಾಕ್ಷಪ್ಪ ಭೇರಗಿ, ಬಾಲರಾಜ ಯಲ್ಲಪ್ಪ ಗಾಳಿ, ಪರಶುರಾಮ ಹನುಮಂತಪ್ಪ ನಾಯಕ ಹಾಗೂ ಶಿವನಗೌಡ ಮರೇಗೌಡ ಪುಂಡಗೌಡ್ರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ವಿವಿಧ ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.