ಕೂಲಿಗಲ್ಲ ಶಾಲೆಗೆ ಅಭಿಯಾನದ ಕುರಿತು ಪೂರ್ವಭಾವಿ ಸಭೆ

ಕೂಲಿಗಲ್ಲ ಶಾಲೆಗೆ ಅಭಿಯಾನದ ಕುರಿತು ಪೂರ್ವಭಾವಿ ಸಭೆ Preparatory meeting on the campaign for schools, not laborers

             ಹುಬ್ಬಳ್ಳಿ 20: ಈಚೆಗೆ ಹುಬ್ಬಳ್ಳಿಯ ಕಾರ್ಮಿಕ ಇಲಾಖೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಅವರು ಕೂಲಿಗಲ್ಲ ಶಾಲೆಗೆ ಅಭಿಯಾನದ ಕುರಿತು ವಿವಿಧ ಭಾಗೀದಾರರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.  ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಅವರು ಮಾತನಾಡಿ, ಭಾರತ ಸಂವಿಧಾನದ ಪರಿಚ್ಛೇದ 21(ಎ) ರನ್ವಯ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ತಿಳಿಸಿದೆ. ಪರಿಚ್ಛೇಧ 24 ರನ್ವಯ 14 ವರ್ಷದೊಳಗಿನ ಮಕ್ಕಳು ಅಪಾಯಕಾರಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತದೆ. ಮಕ್ಕಳ ದುಡಿಮೆ ದೇಶಕ್ಕೆ ಕಳಂಕ ಎಂದು ಮಕ್ಕಳ ದುಡಿಮೆಯನ್ನು ನಿಷೇಧಿಸಿ ಸರ್ಕಾರವು ಕಿಶೋರ ಕಾರ್ಮಿಕ ಪದ್ದತಿ (ನಿಷೇಧ) ಹದಿಯರೆಯದ ಮಕ್ಕಳ ದುಡಿಮೆ ನಿಯಂತ್ರಣ ಕಾಯ್ದೆ 1986 ತಿದ್ದುಪಡಿ-2016ನ್ನು ಜಾರಿಗೆ ತಂದಿರುತ್ತದೆ.  

               ಈ ಕಾಯ್ದೆಯ ಕಲಂ 17 ರನ್ವಯ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೀರೀಕ್ಷಕರುಗಳನ್ನಾಗಿ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಿ ನೇಮಿಸಿ ಆದೇಶಿಸಿದೆ. ಅಧಿಕಾರಿಗಳು ಅನೀರೀಕ್ಷಿತವಾಗಿ ತಂಡದೊಂದಿಗೆ ತಪಾಸಣೆ ಮಾಡಿ ಮಕ್ಕಳು ಶಾಲೆಗೆ ಹೋಗುವಂತೆ ನೋಡಿಕೊಳ್ಳಬೇಕು. ಕಿಶೋರ ಕಾರ್ಮಿಕರಾಗಿ ಗುರುತಿಸಿದ ಮಕ್ಕಳಿಗೆ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು. ಸಂವಿಧಾನವು ನೀಡಿರುವ ಹಕ್ಕುಗಳಿಂದ ಜಿಲ್ಲೆಯ ಮಕ್ಕಳು ವಂಚಿತರಾಗುತ್ತಿದ್ದಾರೆ. ಶಿಕ್ಷಣ ಹಕ್ಕನ್ನು ಪ್ರತಿ ಮಗುವಿಗೂ ಖಾತ್ರಿಪಡಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಧಾರವಾಡ ಜಿಲ್ಲಾಡಳಿತೊಂದಿಗೆ ವಿನೂತನವಾಗಿ “ಕೂಲಿಗಲ್ಲ ಶಾಲೆಗೆ” ಆಭಿಯಾನ ಎಂದು ಶಿರ್ಷಿಕೆಯಡಿ ಕಾರ್ಯಕ್ರಮವನ್ನು ಆರಂಭಿಸುತ್ತಿದೆ ಎಂದರು. 

               2025-26 ನೇ ಸಾಲಿನಲ್ಲಿ 358 ತಪಾಸಣೆಗಳನ್ನು ಕೈಗೊಳ್ಳಲಾಗಿದ್ದು, 19 ಮಕ್ಕಳನ್ನು ಗುರುತಿಸಲಾಗಿರುತ್ತದೆ. ಅದರಲ್ಲಿ 03 ಮಕ್ಕಳು ಬಾಲ ಕಾರ್ಮಿಕರಾಗಿದ್ದು, 16 ಮಕ್ಕಳು ಕಿಶೋರ ಕಾರ್ಮಿಕರಾಗಿರುತ್ತಾರೆ. 02 ಪ್ರಕರಣಗಳು ಇತ್ಯರ್ಥಗೊಂಡಿದ್ದು, 17 ಪ್ರಕರಣಗಳು ಚಾಲ್ತಿಯಲ್ಲಿವೆ ಮತ್ತು ತಪಾಸಣೆಯಲ್ಲಿ ಕಂಡು ಬಂದಂತಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಸಭೆಗೆ ತಿಳಿಸಿದರು.  ಸಭೆಯಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಾದ ಸಚಿನ್ ಹಳೆಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಕಾರ್ಮಿಕ ಅಧಿಕಾರಿಗಳಾದ ಅಕ್ಬರ್ ಮುಲ್ಲಾ, ಮಾರಿಕಾಂಭ ಹುಲಕೋಟಿ, ಕಾರ್ಮಿಕ ಯೋಜನಾಧಿಕಾರಿಗಳಾದ ಬಸವರಾಜ ಹಿರೇಮಠ, ವಿವಿಧ ವಲಯಗಳ ಕಾರ್ಮಿಕ ನೀರೀಕ್ಷಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.