ಮೂರು ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲೂ ಪ್ರಜಾಸೇವಾ ಆಂದೋಲನ

ಮೂರು ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲೂ ಪ್ರಜಾಸೇವಾ ಆಂದೋಲನ  Praja Seva Andolan in all taluks within three months


ಯರಗಟ್ಟಿ 19: ರಾಜ್ಯದ ಎಲ್ಲ ತಾಲೂಕುಗಳಲ್ಲೂ ಮುಂದಿನ ಮೂರು ತಿಂಗಳಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಿ, ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.  

ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರ ನಿರ್ದೇಶನದಂತೆ ರಾಜ್ಯಾದ್ಯಂತ ಜನಸ್ಪಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಮೊದಲ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದರು.  

ಭೂಮಿ ಹಕ್ಕು, ಮನೆ ನಿರ್ಮಾಣ, ವಿದ್ಯುತ್ ಸಮಸ್ಯೆ, ಶಾಲಾ-ಕಾಲೇಜುಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ತ್ವರಿತವಾಗಿ ಪರಿಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಲಭ್ಯವಿರಲಿದ್ದಾರೆ ಎಂದು ತಿಳಿಸಿದರು.  

ಯರಗಟ್ಟಿಗೆ ಪ್ರಮುಖ ಸರ್ಕಾರಿ ಕಚೇರಿಗಳು  ಯರಗಟ್ಟಿಯಲ್ಲಿ ಪ್ರಮುಖ ಸರ್ಕಾರಿ ಕಚೇರಿಗಳ ಕೊರತೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಕೆಲವು ಕಚೇರಿಗಳು ಕಾರ್ಯಾರಂಭಿಸಿವೆ. ಉಳಿದ ಪ್ರಮುಖ ಕಚೇರಿಗಳನ್ನು ಸ್ಥಾಪಿಸಲು ಸ್ವಲ್ಪ ಸಮಯ ಬೇಕಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಕಚೇರಿಗಳನ್ನು ತರಲಾಗುವುದು ಎಂದು ಭರವಸೆ ನೀಡಿದರು.  

ಒಂಬತ್ತು ತಾಲೂಕುಗಳು ಬರಪೀಡಿತ ಪಟ್ಟಿಗೆ ಬೆಳಗಾವಿ ಜಿಲ್ಲೆಯ ಒಂಬತ್ತು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸರ್ಕಾರ ಸೇರೆ​‍್ಡ ಮಾಡಿದೆ. ಇನ್ನೂ ಆರು ತಾಲೂಕುಗಳನ್ನು ಪಟ್ಟಿಗೆ ಸೇರಿಸುವ ಸಾಧ್ಯತೆ ಇದ್ದು, ಇದಕ್ಕೆ ನಿಗದಿತ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ ಎಂದು ಹೇಳಿದರು.

ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಆ ಮಾನದಂಡಗಳಿಗೆ ಒಳಪಟ್ಟ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.  

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಬ್ಬರೂ ನಾಯಕರು ಮಾಜಿ ಸಚಿವ ಕೆ.ಎನ್‌. ರಾಜಣ್ಣ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ತಮ್ಮ ನಾಯಕರು.

ಸರ್ಕಾರದಲ್ಲಿರುವ ಸಚಿವರು ಹಾಗೂ ಶಾಸಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಾಗ ಸರ್ಕಾರ ಬಲವಾಗಿರುತ್ತದೆ ಎಂದರು. ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದ ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿದರು.