ಅಂಚೆ ಇಲಾಖೆಯ ಸೇವೆಗಳು ಈಗ ಸಾರ್ವಜನಿಕರ ಮನೆ ಬಾಗಿಲಿಗೆ: ಮಲ್ಲಪ್ಪ ಪೂಜಾರಿ

ಅಂಚೆ ಇಲಾಖೆಯ ಸೇವೆಗಳು ಈಗ ಸಾರ್ವಜನಿಕರ ಮನೆ ಬಾಗಿಲಿಗೆ: ಮಲ್ಲಪ್ಪ ಪೂಜಾರಿ Postal Department services now at the doorsteps of the public: Mallappa Poojary

ಲೋಕದರ್ಶನ ವರದಿ  

ಇಂಡಿ 29: ಭಾರತೀಯ ಅಂಚೆ ಇಲಾಖೆಯ ವಿಜಯಪುರ ವಿಭಾಗದ ಅಡಿಯಲ್ಲಿ ಬರುವ ಇಂಡಿ ಉಪ ವಿಭಾಗದ ವತಿಯಿಂದ ತಾಲೂಕಿನ ಇಂಗಳಗಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ "ಭಾರತೀಯ ಅಂಚೆ ನಿಮ್ಮ ಮನೆ ಬಾಗಿಲಿಗೆ" ಎಂಬ ಅಂಚೆ ಜನಸಂಪರ್ಕ ಅಭಿಯಾನವು ಯಶಸ್ವಿಯಾಗಿ ಜರುಗಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿಸ್ತಾರವಾಗಿ ಮಾತನಾಡಿದ ಅಂಚೆ ನೀರೀಕ್ಷಕ ಮಲ್ಲಪ್ಪ ಪೂಜಾರಿ ಅವರು, ಇಂದಿನ ಆಧುನಿಕ ಯುಗದಲ್ಲಿ ಅಂಚೆ ಇಲಾಖೆಯು ಕೇವಲ ಪತ್ರ ತಲುಪಿಸುವ ಕೆಲಸಕ್ಕೆ ಸೀಮಿತವಾಗಿಲ್ಲ. ಬದಲಾಗಿ ಒಂದೇ ಸೂರಿನಡಿಯಲ್ಲಿ ಬ್ಯಾಂಕಿಂಗ್, ವಿಮೆ, ಉಳಿತಾಯ ಯೋಜನೆಗಳು ಹಾಗೂ ಆಧಾರ್ ಸೇವೆಗಳನ್ನು ಒಳಗೊಂಡಂತೆ ಹತ್ತಾರು ಜನಪರ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ ಎಂದು ಮಾಹಿತಿ ನೀಡಿದರು.

ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಭದ್ರತೆ ನೀಡಲು ಅಂಚೆ ಇಲಾಖೆಯು ಬದ್ಧವಾಗಿದೆ ಎಂದು ಅವರು ತಿಳಿಸಿದರು.ನಂತರ ಬ್ರಾಂಚ್ ಪೋಸ್ಟ್‌ ಮಾಸ್ಟರ್ ಸುಭಾಸ ಥೋರಾತ ಮಾತನಾಡಿ, "ಭಾರತೀಯ ಅಂಚೆ ನಿಮ್ಮ ಮನೆ ಬಾಗಿಲಿಗೆ ಎಂಬ ಅಭಿಯಾನದ ಅಡಿಯಲ್ಲಿ ನಾವು ಪ್ರತಿಯೊಂದು ಮನೆಗೂ ಅಂಚೆ ಇಲಾಖೆಯ ಸೌಲಭ್ಯಗಳನ್ನು ತಲುಪಿಸುತ್ತಿದ್ದೇವೆ. ವಿಶೇಷವಾಗಿ ಗ್ರಾಮೀಣ ಭಾಗದ ರೈತರು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ನಿಟ್ಟಿನಲ್ಲಿ ನಾವು ಸದಾ ಸಿದ್ಧರಿದ್ದೇವೆ. ಜನರಿಗೆ ಅಗತ್ಯವಿರುವ ಎಲ್ಲಾ ಅಂಚೆ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ," ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಅಂಚೆ ಮೇಲ್ವಿಚಾರಕರಾದ ಕೆ. ಎಂ. ಬಂಡಗಾರ್, ಜೆ. ಆರ್‌. ಬಿರಾದಾರ ಹಾಗೂ ಗ್ರಾಮಸ್ಥರಾದ ಅರ್ಜುನ ಜಾಧವ, ಹಸನ ಮಣೂರ, ಆನಂದ ಪವಾರ, ಅಣ್ಣಪ್ಪ ಅಹಿರಸಂಗ, ಉಮೇಶ ಚವಾಣ, ಅಶೋಕ ಬಳಬಟ್ಟಿ, ವಿಠ್ಠಲ ಹೊನಮಾನೆ, ಪ್ರಭಾಕರ ವಾಲಿಕಾರ, ವರದಪ್ಪ ಓಂಕಾರಶೆಟ್ಟಿ, ಚಿಮ್ಮಾಜಿ ಥೋರಾತ, ಗುಡುಸಾಬ ಅಹಿರಸಂಗ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಇಂಗಳಗಿ ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡರು.