ವಾಷಿಂಗ್ಟನ್, ಜ 10, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಕುರಿತು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಅವರು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೋನಿಯೋ ಗುಟೇರಸ್ ರೊಂದಿಗೆ ಚರ್ಚಿಸಿದ್ದಾರೆ. ಬಾಗ್ದಾದ್ ನಲ್ಲಿ ಇರಾನ್ ನ ಕುಡ್ಸ್ ಫೋರ್ಸ್ ಕಮಾಂಡರ್ ಖಾಸೆಮ್ ಸೊಲೆಮನಿ ಅವರನ್ನು ಅಮೆರಿಕ, ಡ್ರೋನ್ ದಾಳಿಯಲ್ಲಿ ಹತ್ಯೆಮಾಡಿದ್ದು ಹಾಗೂ ಇದಕ್ಕೆ ಪ್ರತೀಕಾರವಾಗಿ ಇರಾಕ್ ನಲ್ಲಿನ ಅಮೆರಿಕ ಸೇನಾ ಶಿಬಿರಗಳ ಮೇಲೆ ಇರಾನ್ ದಾಳಿ ನಡೆಸಿದ್ದರಿಂದ 2020ರ ಆರಂಭದಲ್ಲೇ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ವಿಷಮ ಸ್ಥಿತಿಗೆ ತಲುಪಿತ್ತು. ‘ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಅಂಟೊನಿಯೊ ಗುಟೇರಸ್ ಅವರೊಂದಿಗೆ ಚರ್ಚೆ ನಡೆಸಿರುವುದಕ್ಕೆ ಸಂತಸವಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಕುರಿತು ಅವರೊಂದಿಗೆ ಪ್ರಮುಖವಾಗಿ ಚರ್ಚಿಸಲಾಗಿದೆ.’ ಎಂದು ಪೊಂಪಿಯೋ ಟ್ವಿಟರ್ ನಲ್ಲಿ ಗುರುವಾರ ಬರೆದಿದ್ದಾರೆ. ಇರಾನ್ ಮೇಲೆ ದಿಗ್ಬಂಧನ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ ನಂತರ ಇರಾನ್ ಸಹ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ.