ಬೆಂಗಳೂರು, ನ. 14 : ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುವಂತೆ ಅಖಾಡಕ್ಕೆ ಇಳಿಯುವುದು ಯುದ್ಧ ಮಾಡುವುದು ಮುಖ್ಯ. ಸೋಲು-ಗೆಲುವು ನಿರೀಕ್ಷಿಸಬಾರದು. ಅದರಂತೆ ನಾವು ಉಪಚುನಾವಣೆಯ ಅಖಾಡಕ್ಕೆ ಇಳಿದು ರಾಜಕೀಯ ತಂತ್ರ ರೂಪಿಸಿದ್ದೇವೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ.
ಗುರುವಾರ ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣ ಎಂದ ಮೇಲೆ ತಂತ್ರ ರೂಪಿಸಬೇಕು. ಅದರಂತೆ ನಾವು ತಂತ್ರಗಾರಿಕೆ ಹೆಣೆದಿದ್ದೇವೆ. ಜೆಡಿಎಸ್ ಪಕ್ಷ ಗೆಲ್ಲಲೇಬೇಕೆಂಬ ಉದ್ದೇಶದಿಂದಲೇ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಅಥವಾ ಬಿಜೆಪಿ ಅಭ್ಯರ್ಥಿಗಳನ್ನಾಗಲೀ ಗೆಲ್ಲಿಸಲು ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದು ಒತ್ತಿ ಹೇಳಿದರು.
ಜೆಡಿಎಸ್ ಸಣ್ಣ ಪ್ರಾದೇಶಿಕ ಪಕ್ಷ ಆಗಿರಬಹುದು. ಆದರೆ ಈ ಎರಡೂ ಪಕ್ಷಗಳು ಜೆಡಿಎಸ್ ಅನ್ನು ಕಡೆಗಣಿಸಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಇನ್ನೂ ಶಕ್ತಿವಂತ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ. ನಾನು ಇಂದು ಇರಬಹುದು ನಾಳೆ ಇಲ್ಲದಿರಬಹುದು, ಆದರೆ ಪಕ್ಷದ ಬೇರನ್ನು ಯಾರೂ ಕೀಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಗೆಲ್ಲಲು ತಂತ್ರಗಾರಿಕೆ ಮಾಡುವುದಿಲ್ಲ. ನನಗೆ ಕಾಂಗ್ರೆಸ್ ಶತೃ ಅಲ್ಲ. ಮೈತ್ರಿ ಸರ್ಕಾರ ಉರುಳಲು ಕಾರಣರಾದ ಎಲ್ಲಾ ಹದಿನೈದು ಅನರ್ಹ ಶಾಸಕರು ಶತೃಗಳೇ. ಮೊದಲು ನಮ್ಮ ಅಭ್ಯರ್ಥಿ ಗೆಲ್ಲಬೇಕು ಎಂಬುದು ನಮ್ಮ ತಂತ್ರಗಾರಿಕೆ. ನಂತರ ನಮ್ಮ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿಲ್ಲದ ಕಡೆ ಅನರ್ಹರ ಸೋಲಿಸಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಒಗಟಾಗಿ ಹೇಳಿದರು.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ದುರಹಂಕಾರ. ಅವರ ನಡವಳಿಕೆಯನ್ನು, ಮಾತಿನ ಶೈಲಿಯನ್ನು ಬದಲಾಯಿಸಿಕೊಳ್ಳಿ ಎಂದು ಹಲವಾರು ಬಾರಿ ಸಲಹೆ ನೀಡಿದ್ದೆ. ಯಡಿಯೂರಪ್ಪ ಆಗ ಕೆಜೆಪಿಗೆ ಹೋಗದೇ ಇದ್ದಿದ್ದರೆ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅಂದು ಹಾಗೂ ಈಗ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಅವರೇ ಕಾರಣ. ನಮ್ಮನ್ನು ಮುಳುಗಿಸಲು ಹೋಗಿ ಕಾಂಗ್ರೆಸ್ ನಾಯಕರು ತಮ್ಮ ತಲೆಯ ಮೇಲೆ ತಾವೇ ಕಲ್ಲುಬಂಡೆ ಎತ್ತಿ ಹಾಕಿಕೊಂಡಿದ್ದಾರೆ ಎಂದು ಹೇಳಿದರು.
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 19 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದ್ದೆ. ಆದರೂ ನನ್ನನ್ನು ಹಾಗೂ ಸಹೋದರ ರೇವಣ್ಣ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ನಾವು ಅಂತಹ ಯಾವುದೇ ತಪ್ಪು ಮಾಡಿಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ನನ್ನ ಭವಿಷ್ಯಕ್ಕಾಗಿ ನನ್ನ ರಾಜಕೀಯದ ಭವಿಷ್ಯದ ಬಗ್ಗೆ ಆಗಲಿ ಪಕ್ಷದ ವರಿಷ್ಠರು ಹಾಗೂ ತಂದೆಯಾಗಿರುವ ಎಚ್.ಡಿ. ದೇವೇಗೌಡರು ಎಂದಿಗೂ ಚಿಂತಿಸಲಿಲ್ಲ. ನಾನು ರಾಜಕಾರಣಕ್ಕೆ ಬರುವುದನ್ನು ದೇವೇಗೌಡರು ಒಪ್ಪಿರಲಿಲ್ಲ. ನನ್ನ ಭವಿಷ್ಯ ನನಗಾಗಲಿ ನನ್ನ ತಂದೆಗಾಗಲೇ ಮುಖ್ಯವಲ್ಲ. ಮೈತ್ರಿ ಸರ್ಕಾರದಲ್ಲಿ ಯಾರು ಯಾರು ಏನೇನು ಮಾಡಿದ್ದಾರೆ ? ತಪ್ಪು ಎಲ್ಲಾಗಿದೆ ? ಎಂಬುದಕ್ಕೆ ಉತ್ತರ ನೀಡುತ್ತೇವೆ ಎಂದು ಹೇಳಿದರು.
ನಾನು ರಾಜಕೀಯಕ್ಕೆ ಬಂದು ಹಣ ಆಸ್ತಿ ಮಾಡಿಲ್ಲ, ಜನರ ಪ್ರೀತಿ ಗಳಿಸಿದ್ದೇನೆ. ನನಗೆ ರಾಜಕೀಯಕ್ಕಿಂತ ರಾಜ್ಯದ ಜನರ ಕಲ್ಯಾಣ ಮುಖ್ಯ. ಈ ವಿಷಯದಲ್ಲಿ ನನ್ನ ಬಗ್ಗೆ ಯಾವುದೇ ಅನುಮಾನ ಬೇಡ. ನಾನು ಉಳಿಯುವುದಕ್ಕಿಂತ ರಾಜ್ಯ ಉಳಿಯುವುದು ಮುಖ್ಯ ಎಂದರು.
ಮೈತ್ರಿ ಸರ್ಕಾರ ಪತನ ಗೊಳ್ಳಲು ಮೂಲ ಕಾರಣವೇ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಕೆ. ಸುಧಾಕರ್. ಈಗ ಅವರಿಗೆ ಕುಮಾರಸ್ವಾಮಿ ಮೇಲೆ ಪ್ರೀತಿ ಬಂದಿದೆ. ಹುಣಸೂರು ಕ್ಷೇತ್ರದಲ್ಲಿ ಬೆಂಬಲಿಸಿದರೆ ಚನ್ನಪಟ್ಬಣ ನಿಮಗೆ ಸುಲಭವಾಗುತ್ತದೆ ಎಂದು ಬಿಜೆಪಿಯ ಸಿ.ಪಿ.ಯೋಗೇಶ್ವರ್ ಮನವಿ ಮಾಡುತ್ತಿದ್ದಾರೆ. ಇವರಿಗೆಲ್ಲ ಈಗ ಕುಮಾರಸ್ವಾಮಿಯ ಅವಶ್ಯಕತೆ ಎದುರಾಗಿದೆ ಎಂದು ಲೇವಡಿ ಮಾಡಿದರು.
ರಾಜಕೀಯ ಸನ್ನಿವೇಶದಲ್ಲಿ ಬದಲಾವಣೆ ಸಹಜ. ಈ ಹಿಂದೆ ಬಚ್ಚೇಗೌಡರಿಗೂ ಜೆಡಿಎಸ್ಗೆ ಅಂದಿನ ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಬಂದಿದ್ದು ನಿಜವಾದರೂ ಈಗ ಹತ್ತು ವರ್ಷದ ಹಿಂದಿನ ಚರಿತ್ರೆ ತೆಗೆದು ನೋಡುವ ಅವಶ್ಯಕತೆ ಇಲ್ಲ. ನನಗೆ ದೊಡ್ಡಮಟ್ಟದ ಶಕ್ತಿ ಇಲ್ಲ. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಅವರಿಗೆ ಒಕ್ಕಲಿಗ ಸಮುದಾಯ ಎಂಬ ಕಾರಣಕ್ಕೆ ಅಷ್ಟೇ ಬೆಂಬಲ ಕೊಡುತ್ತಿಲ್ಲ, ಅಲ್ಲಿನ ಜನರ ಅಭಿಪ್ರಾಯ ಸಂಗ್ರಹಿಸಿ ಶರತ್ ಬಚ್ಚೇಗೌಡ ಗೆಲುವಿಗೆ ಸಹಕರಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಉಪಚುನಾವಣೆಯನ್ನು ಗೆಲ್ಲುವುದು ಜೆಡಿಎಸ್ ಗೆ ಮಾತ್ರ ಅನಿವಾರ್ಯವಲ್ಲ, ಇದು ಕಾಂಗ್ರೆಸ್ ಹಾಗೂ ಬಿಜೆಪಿಗೂ ಅನಿವಾರ್ಯವೇ. ಚುನಾವಣಾ ಫಲಿತಾಂಶದ ಬಳಿಕ ನಿಜವಾದ ರಾಜಕೀಯ ಆರಂಭವಾಗುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ಏಳು ಸ್ಥಾನಗಳನ್ನು ಗೆಲ್ಲದೇ ಹೋದಲ್ಲಿ ಯಡಿಯೂರಪ್ಪಗೆ ಸಂಕಷ್ಟವಿದೆ. ಏಳು ಸ್ಥಾನ ಗೆದ್ದರಷ್ಟೆ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ಅರ್ಥದಲ್ಲಿ ದೇವೇಗೌಡರು ಮಾತನಾಡಿದ್ದಾರೆಯೇ ಹೊರತು ಅವರೆಲ್ಲಿಯೂ ಬಿಜೆಪಿಗೆ ಬೆಂಬಲ ಕೊಡುವುದಾಗಿ ಹೇಳಿಲ್ಲ. ಉಪಚುನಾವಣೆ ಮೇಲೆ ಮೂರು ಪಕ್ಷಗಳ ಭವಿಷ್ಯ ನಿಂತಿದೆ ಎಂದರು.
ಮೈತ್ರಿ ಸರ್ಕಾರ ಪತನವಾದ ಬಳಿಕ ತಾವು ಹೆಚ್ಚಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ ಇದ್ದರೂ ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ಡಿಸೆಂಬರ್ 10 ರ ಬಳಿಕ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಪಕ್ಷದಿಂದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ರೈತರ ಸಾಲಮನ್ನಾ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.