ಬೆಂಗಳೂರು, ಏ.10, ಕೊರೊನಾ ವೈರಸ್ ಹತೋಟಿಗೆ ತರಲು ಲಾಕ್ಡೌನ್ ಆದೇಶವಾದಾಗಿನಿಂದ ಪೊಲೀಸರು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಕೊಂಚ ವಿಶ್ರಾಂತಿಗಾಗಿ ಸಮಯಾವಕಾಶ ನೀಡಲು ಮುಂದಾಗಿದ್ದಾರೆ.ನಗರ ಠಾಣೆಗಳ ಪೊಲೀಸ್ ಸಿಬ್ಬಂದಿ ನಿತ್ಯ ಕೆಲಸದಲ್ಲಿ ತೊಡಗುತ್ತಿದ್ದರಿಂದ ಅವರಿಗೂ ವಿಶ್ರಾಂತಿ ನೀಡುವ ಉದ್ದೇಶದಿಂದ ಪ್ರತಿ ಠಾಣೆಯ ಮೂರನೇ ಒಂದು ಭಾಗದ ಸಿಬ್ಬಂದಿಗೆ ರಜೆ ನೀಡುವಂತೆ ಆಯುಕ್ತರು ಸೂಚಿಸಿದ್ದಾರೆ. ಕೊರೊನಾ ಸೋಂಕಿತರು, ಶಂಕಿತರು ಇರುವ ಕಡೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಳ್ಳುತ್ತಾರೆ. ಹೀಗಾಗಿ ಅವರ ಆರೋಗ್ಯದ ಹಿತ ದೃಷ್ಟಿಯಿಂದ ಸಬ್ಇನ್ಸ್ಪೆಕ್ಟರ್ ಶ್ರೇಣಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ. ಈ ಮೂಲಕ ಸಿಬ್ಬಂದಿಗೆ ಆಯುಕ್ತರು, ಷರತ್ತುಬದ್ಧ ವಾರದ ರಜೆ ನೀಡಲು ಮುಂದಾಗಿದ್ದಾರೆ.