ಬೀದಿ ನಾಯಿಗೆ ಗುಂಡಿಕ್ಕಿದ ವೃದ್ಧನನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ನ.11 :     ನಿರಂತರವಾಗಿ ಮನೆಯ ಬಳಿ ಬಂದು ಬೊಗಳುತ್ತಿದ್ದ ಬೀದಿ ನಾಯಿಗೆ ವೃದ್ಧರೊಬ್ಬರು ಏರ್ಗನ್ನಿಂದ 3 ಗುಂಡು ಹಾರಿಸಿರುವ ಘಟನೆ ಜಯನಗರ 5ನೇ  ಬ್ಲಾಕ್ನಲ್ಲಿ ನಡೆದಿದ್ದು, ನಾಯಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಗಾಯಗೊಂಡಿರುವ ನಾಯಿಯನ್ನು ಜಯನಗರ ಪಶು ಆಸ್ಪತ್ರೆಯಲ್ಲಿ  ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಅದನ್ನು ಜೆ.ಪಿ. ನಗರದ ಜೀವ ಪೆಟ್ ಕ್ಲಿನಿಕ್ ಗೆ  ವರ್ಗಾಯಿಸಲಾಗಿದೆ. ಅಲ್ಲಿ ಪಶು ವೈದ್ಯರು ನಾಯಿಯ ದೇಹವನ್ನು ಸ್ಕ್ಯಾನ್ ಮಾಡಿ, ಅಲ್ಲಿದ್ದ 3 ಗುಂಡುಗಳನ್ನು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ನಾಯಿ ಮೇಲೆ ಗುಂಡು ಹಾರಿಸಿರುವ 85 ವರ್ಷ ವಯಸ್ಸಿನ ವೃದ್ಧರನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.