ಜೀವ ಸಂಕುಲವನ್ನು ರಕ್ಷಣೆ ಮಾಡಲು ಪಣ: ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ


ಕೊಪ್ಪಳ 22: ಕರ್ನಾಟಕ ಜೀವವೈವಿಧ್ಯ ಮಂಡಳಿಯು ಕೊಪ್ಪಳ ಜಿಲ್ಲೆಯಲ್ಲಿರುವ ಜೀವ ಸಂಕುಲವನ್ನು ರಕ್ಷಣೆ ಮಾಡಲು ಪಣತೊಟ್ಟಿದೆ ಎಂದು ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಹಮ್ಮಿಕೊಳ್ಳಲಾದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾಡಿನ ಜೈವಿಕ ಸಂಪನ್ಮೂಲವನ್ನು ರಕ್ಷಿಸುವುದು ಜೀವವೈವಿಧ್ಯ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಸರ್ಕಾರ ರೂಪಿಸಿರುವ ಕರ್ನಾಟಕ ಜೀವವೈವಿಧ್ಯ ನಿಯಮಾವಳಿಗಳ (2005)ರ ಅಡಿಯಲ್ಲಿ ಈ ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತಿವೆ.  ನಮ್ಮ ನಾಡಿನ ಸಮಸ್ತ ಜೀವ ಸಂಕುಲಗಳನ್ನು ರಕ್ಷಿಸುವುದು, ಕಾಪಾಡುವುದು ಮೂಲ ಧ್ಯೇಯವಾಗಿದೆ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ಪಾರಂಪರಿಕ ಜೀವವೈವಿಧ್ಯ ತಾಣಗಳನ್ನು ಹೆಚ್ಚಿಸಬೇಕಾದರೆ, ಅವುಗಳಿಗೆ ಸಂಬಂಧಪಟ್ಟ ಪ್ರಸ್ತಾವನೆಗಳು ನಮ್ಮಲ್ಲಿಗೆ ಸೇರಬೇಕು. ರಾಜ್ಯಾದ್ಯಂತ ಈಗಾಗಲೇ 2 ಸಾವಿರ ವರದಿಗಳನ್ನು ಸಿದ್ದಪಡಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನಗಳನ್ನು ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ.  ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ 4 ತಾಲ್ಲೂಕುಗಳನ್ನು 13 ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ದಾಖಲೆಗಳ ವರದಿಯನ್ನು ಮಾಡಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪ್ರಾಣಿಸಂಕುಲ ರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾಣಲು ಜನಸಾಮಾನ್ಯರ ಸಹಕಾರ, ಪಾಲ್ಗೊಳ್ಳುವಿಕೆ ತುಂಬಾ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. 

ಜೀವವೈವಿಧ್ಯ ಮಂಡಳಿಯಿಂದ ಬರುವ ಅನುದಾನದಲ್ಲಿ ಶೇ.5ರಷ್ಟು ಗ್ರಾಮ ಪಂಚಾಯತಿ ಜೀವವೈವಿಧ್ಯ ಸಮಿತಿಗಾಗಿ ಮೀಸಲಿಡಲಾಗುತ್ತದೆ. ಇದರಲ್ಲಿ ಕೃಷಿ ಜೀವವೈವಿಧ್ಯತೆ, ನರಿ ಸಂರಕ್ಷಣೆ, ತೋಟಗಾರಿಕೆ ಮತ್ತು ಕೃಷಿ ಬೀಜ ವೈವಿಧ್ಯತೆ, ಮಕ್ಕಳಿಗೆ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಈ ಅನುದಾನವನ್ನು ಬಳಕೆ ಮಾಡಬಹುದಾಗಿದೆ.  ಈ ಅನುದಾನವನ್ನು 14 ನೇ ಹಣಕಾಸು ಯೋಜನೆಯಲ್ಲಿ ಬಳಕೆ ಮಾಡಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯತಿ ಮತ್ತು ನಗರಾಭಿವೃದ್ಧಿ ಕೋಶದ ಮೂಲಕ ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್ ಮತ್ತು ವಾಯುಮಾಲಿನ್ಯ ತಡೆಗಟ್ಟುವಂತಹ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ನಗರ/ ಪಟ್ಟಣ ಪ್ರದೇಶಗಳಲ್ಲಿಯೂ ಸಹ ಜೀವವೈವಿಧ್ಯ ಪಾರಂಪರಿಕ ತಾಣಗಳನ್ನು ಗುರುತಿಸುವ ಕಾರ್ಯ ನಡೆಯಬೇಕು.  ಈ ದಿಶೆಯಲ್ಲಿ ಸಂಬಂಧಿಸಿದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ಗಳು ಅಗತ್ಯ ಕ್ರಮ ಕೈಗೊಳ್ಳಬೇಕು.  ಜಿಲ್ಲೆಯ ಅಂಜನಾದ್ರಿ ಬೆಟ್ಟವನ್ನು ಜೀವವೈವಿಧ್ಯ ತಾಣವನ್ನಾಗಿ ಮಾಡಲು ಪ್ರಸ್ತಾವನೆ ಸಲ್ಲಿಕೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ ಕ್ಷೀರಸಾಗರ, ಸಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಪಾಂಡುರಂಗ, ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಹನಮಂತಪ್ಪ ಈ ಸಂದರ್ಭ ಉಪಸ್ಥಿತರಿದ್ದರು.