ಪೆರು ಅನಿಲ ಟ್ರಕ್ ಸ್ಫೋಟ : ಮೃತರ ಸಂಖ್ಯೆ 16 ಕ್ಕೆ ಏರಿಕೆ

ಲಿಮಾ, ಜ 30, ಪೆರು ರಾಜಧಾನಿ ಲಿಮಾದಲ್ಲಿ ಕಳೆದ ವಾರ ಸಂಭವಿಸಿದ ಅನಿಲ ಟ್ಯಾಂಕರ್ ಟ್ರಕ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಜನವರಿ 23 ರಿಂದ ಲೊಯೆಜಾ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ 27 ವರ್ಷದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ತೀವ್ರವಾದ  ಸುಟ್ಟಗಾಯಗಳಾಗಿದ್ದು ಆ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.   10 ಮಕ್ಕಳು ಸೇರಿದಂತೆ 31 ಜನರು ಆಸ್ಪತ್ರೆಗೆ ದಾಖಲಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಸಚಿವಾಲಯ ಹೇಳಿದೆ.ಸಂತ್ರಸ್ತರ ಸುಟ್ಟ ಗಾಯಗಳ ಕಸಿಗಾಗಿ ಪೆರುವಿಗೆ 20,000 ಸೆಂಟಿಮೀಟರ್ ಮಾನವ ಚರ್ಮವನ್ನು ಕಳುಹಿಸಲಾಗಿದೆ ಎಂದು ಬ್ರೆಜಿಲ್ ನ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.ನಗರದ ವಿಲ್ಲಾ ಎಲ್ ಸಾಲ್ವಡಾರ್ ಜಿಲ್ಲೆಯಲ್ಲಿ ಅದೇ ದಿನ ಸಂಭವಿಸಿದ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದ 11 ಜನರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ. ರಸ್ತೆಯ ಬಂಪ್‌ಗೆ ಟ್ಯಾಂಕರ್ ಟ್ರಕ್ ಡಿಕ್ಕಿ ಹೊಡೆದು ಅನಿಲ ಸೋರಿಕೆಗೆ ಕಾರಣವಾಯಿತು. ಇದರಿಂದ ಬೆಂಕಿ ಹೊತ್ತುಕೊಂಡು ಕಿಡಿ ಹಾರಿ ಹತ್ತಿರದ ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.