ಜೆಎಸ್‌ಎಸ್ ಐಟಿಐ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ
Personality Development Workshop for JSS ITI Students
ಲೋಕದರ್ಶನ ವರದಿ
ಧಾರವಾಡ, ಆ. 3: ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ತಾಂತ್ರಿಕ ಜ್ಞಾನದ ಜೊತೆಗೆ ಉತ್ತಮ ವ್ಯಕ್ತಿತ್ವವೂ ಅತ್ಯಗತ್ಯ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್ ಹೇಳಿದರು. ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಐಟಿಐ ಹಾಗೂ ಕೌಶಲ್ಯ ಐಟಿಐ ಕಾಲೇಜುಗಳಲ್ಲಿ 2026-27ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ವಾರದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಟಿಐ ವಿದ್ಯಾರ್ಥಿಗಳು ದೇಶದ ಕೈಗಾರಿಕೆಗಳ ಬೆನ್ನೆಲುಬಾಗಿದ್ದು, ಕಾರ್ಖಾನೆಗಳು, ವಿದ್ಯುತ್ ಇಲಾಖೆ, ರೈಲ್ವೆ, ಮೆಟ್ರೋ, ನಿರ್ಮಾಣ, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಸೌರಶಕ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನುರಿತ ತಾಂತ್ರಿಕ ಸಿಬ್ಬಂದಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಉತ್ತಮ ಉದ್ಯೋಗ ಪಡೆಯಲು ವ್ಯಕ್ತಿತ್ವ ವಿಕಸನಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ವ್ಯಕ್ತಿತ್ವ ಎಂದರೆ ಕೇವಲ ಬಾಹ್ಯ ಸೌಂದರ್ಯ ಅಥವಾ ಉಡುಗೆ ಅಲ್ಲ; ಆಲೋಚನೆ, ಮಾತು, ವರ್ತನೆ ಹಾಗೂ ಇತರರೊಂದಿಗೆ ನಡೆದುಕೊಳ್ಳುವ ರೀತಿ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಧಾರವಾಡ ಹಾಗೂ ಸುತ್ತಮುತ್ತಲಿನ ಕೈಗಾರಿಕೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವ ಉದ್ದೇಶದಿಂದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರು ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಐಟಿಐ ಹಾಗೂ ಕೌಶಲ್ಯ ಐಟಿಐ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಗಳು ಆರಂಭದಿಂದಲೂ ಉತ್ತಮ ಫಲಿತಾಂಶ ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಜೆಎಸ್‌ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ, ಶಿಸ್ತು, ಆತ್ಮವಿಶ್ವಾಸ ಹಾಗೂ ನಿಷ್ಠೆ ಅಗತ್ಯ. ಸರಿಯಾದ ಮಾಹಿತಿ ಮತ್ತು ಉತ್ತಮ ಮನೋಭಾವ ಹೊಂದಿದವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಿದರು.
ವಿಸ್ತಾರ ಜಿಂದಗಿ ಟೀಚರ್ಸ್ ಅಕಾಡೆಮಿಯ ಮಹೇಶ್ ಮಾಶಾಳ ಉಪನ್ಯಾಸ ನೀಡಿ, ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದ್ದು, ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡರೆ ಯಶಸ್ಸು ಸಾಧ್ಯ. ಪೋಷಕರು ಮತ್ತು ಶಿಕ್ಷಕರ ಕನಸುಗಳನ್ನು ನನಸಾಗಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ. ಗುರುಗಳ ಮಾರ್ಗದರ್ಶನವನ್ನು ಅನುಸರಿಸಿ, ಆಧುನಿಕ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜೆಎಸ್‌ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಸ್ವಾಗತಿಸಿ, ಕಾಲೇಜಿನ ನಿಯಮಾವಳಿ ಹಾಗೂ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಶ್ವಿನಿ ದೇಸಾಯಿ ಪ್ರಾರ್ಥನೆ ನೆರವೇರಿಸಿದರು. ರಾಹುಲ್ ಉಪಾಧ್ಯೆ ವಂದಿಸಿದರು. ವಿನಾಯಕ ಗವಳಿ ಹಾಗೂ ಮಂಜುನಾಥ ಚಟ್ಟೇರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 