ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ Permission is mandatory for the installation of Ganesha idols

ಲೋಕದರ್ಶನ ವರದಿ 

ಯರಗಟ್ಟಿ 09 :  ಗಣೇಶೋತ್ಸವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ಸೆ.13ರೊಳಗೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಸಿಪಿಐ ಐ.ಎಂ.ಮಠಪತಿ ಹೇಳಿದರು. ಪಟ್ಟಣದ ಮಹಾಂತ ದುರದುಂಡೇಶ್ವರ ಮಠದ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಣೇಶ ಹಬ್ಬದ ನಿಮಿತ್ಯ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿ, ಧ್ವನಿ ವರ್ಧಕಗಳ ಬಳಕೆ, ಮೆರವಣಿಗೆ ಸಮಯ, ಮಾರ್ಗ ಹಾಗೂ ಸುರಕ್ಷತಾ ಕ್ರಮ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು. ಡಿಜೆ ಬಳಕೆ ನಿಷೇಧ, ಸ್ವಯಂಸೇವಕರ ಪಟ್ಟಿ ಕಡ್ಡಾಯ ಗಣೇಶ ಚತುರ್ಥಿ ಆಚರಣೆ ಸುರಕ್ಷಿತ ಹಾಗೂ ಶಾಂತಿಯುತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಪೊಲೀಸರು ನಿಗದಿಪಡಿಸಿರುವ ಸಮಯವನ್ನು ಆಯೋಜಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನುಮತಿಸಲಾದ ಸಮಯವನ್ನು ಮೀರಿ ಕಾರ್ಯಕ್ರಮಗಳನ್ನು ಮುಂದುವರಿಸುವಂತಿಲ್ಲ.  ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹಿನ್ನೆಲೆಯಲ್ಲಿ ಗಣೇಶೋತ್ಸವ ಹಾಗೂ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾನೂನುಬದ್ಧವಾಗಿ ಅನುಮತಿಸಲಾದ ಡೆಸಿಬಲ್  ಮಿತಿಯೊಳಗೆ ಕಾರ್ಯನಿರ್ವಹಿಸುವ ಧ್ವನಿವರ್ಧಕ ವ್ಯವಸ್ಥೆಗಳಿಗೆ ಮಾತ್ರ ಅವಕಾಶವಿರಲಿದೆ.  ಉತ್ಸವ ಸಮಿತಿಗಳು ತಮ್ಮ ಸ್ವಯಂಸೇವಕರ ಸಂಪೂರ್ಣ ಪಟ್ಟಿಯನ್ನು ಪೊಲೀಸರಿಗೆ ಸಲ್ಲಿಸುವುದನ್ನೂ ಕಡ್ಡಾಯ  ಗೊಳಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ವಿವರಗಳು ಹಾಗೂ ಉದ್ದೇಶಿತ ಮಾರ್ಗವನ್ನು ಮುಂಚಿತವಾಗಿ ಪೊಲೀಸರಿಗೆ ನೀಡಬೇಕು.

ಆದರೆ, ಭದ್ರತೆ ಅಥವಾ ಸಂಚಾರ ನಿರ್ವಹಣೆಯ ಅಗತ್ಯವಿದ್ದಲ್ಲಿ, ಈಗಾಗಲೇ ಅನುಮೋದನೆ ನೀಡಿದ ಮಾರ್ಗವನ್ನೂ ಬದಲಾಯಿಸುವ ಹಕ್ಕು ಪೊಲೀಸರಿಗೆ ಇರಲಿದೆ ಎಂದು ಹೇಳಿದರು. ತಹಶೀಲ್ದಾರ ಎಂ.ವಿ.ಗುಂಡಪ್ಪಗೋಳ ಮಾತನಾಡಿ, ಉತ್ಸವ ಸಮಿತಿಯ ಸದಸ್ಯರು ಗಣೇಶ ಮೂರ್ತಿಗಳು, ಪೆಂಡಾಲ್, ಧ್ವನಿವರ್ಧಕ ವ್ಯವಸ್ಥೆಗಳು ಹಾಗೂ ಫ್ಲೆಕ್ಸ್‌ ಬ್ಯಾನರ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ಸಲ್ಲಿಸಬೇಕು. ಗಣೇಶ ಮೂರ್ತಿಯ ಎತ್ತರ ಹಾಗೂ ಉತ್ಸವ ನಡೆಯುವ ಅವಧಿಯ ವಿವರಗಳನ್ನೂ ನೀಡಬೇಕು. ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುವ ದಿನಾಂಕ, ಸಮಯ ಹಾಗೂ ಮಾರ್ಗದ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.

ಪ.ಪಂ.ಮುಖ್ಯಾಧಿಕಾರಿ ಮಹೇಶ ಭಜಂತ್ರಿ ಮಾತನಾಡಿ, ಗಣೇಶ ಮೂರ್ತಿ ವಿಸರ್ಜನೆಯಿಂದ ಪಟ್ಟಣದ ವ್ಯಾಪ್ತಿಯ ಕೆರೆಗಳಲ್ಲಿ ಉಂಟಾಗುವ ಮಾಲಿನ್ಯ ತಡೆಗಟ್ಟಲು ಕಸದ ಬುಟ್ಟಿ ಇಡಲಾಗುವುದು ಇತರೆ ವಸ್ತುಗಳನ್ನು ವಿಂಗಡಿಸಿ ಸಂಸ್ಕರಣಾ  ಘಟಕಗಳಿಗೆ ರವಾನಿಸುವುದು. ಸಾರ್ವಜನಿಕರ ಸುರಕ್ಷತೆಗಾಗಿ ವಿಸರ್ಜನೆಗೆ ಪ್ರತ್ಯೆಕ ತಂಡಗಳನ್ನು ನೇಮಿಸುವುದು ಎಂದರು.  ಈ ವೇಳೆ ಹೇಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ, ಪಿಎಸ್‌ಐ ಎಲ್‌.ಬಿ.ಮಾಳಿ, ಪ್ರಪೇಸನರಿ ಪಿಎಸ್‌ಐ ಮಾರುತಿ ಲಮಾಣಿ, ಎಎಸ್‌ಐ ಬಿ.ಕೆ.ರಂಗಣ್ಣವರ, ಪೊಲೀಸ್ ಸಿಬ್ಬಂದಿಯಾದ ಎಂ.ಬಿ.ಸಣ್ಣನಾಯ್ಕರ, ಮಹಾಂತೇಶ ಜಕಾತಿ, ವೆಂಕಟೇಶ ದೇವರಡ್ಡಿ, ಸದಾನಂದ ಹಣಬರ,

ಪೈಗಂಬರ ನದಾಫ, ವಿಠ್ಠಲಗೌಡ ದೇವರಡ್ಡಿ, ರಾಜೇಂದ್ರಗೌಡ ಪಾಟೀಲ, ಜೆ.ರತ್ನಾಕರ ಶೆಟ್ಟಿ, ಮೋಹನ ಹಾದಿಮನಿ, ಬಾಸ್ಕರ ಹಿರೇಮೆತ್ರಿ, ಶ್ರೀಶೈಲ ವಾಲಿ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಹನಮಂತ ಹಾರೂಗೊಪ್ಪ, ಸಲೀಂಬೇಗ ಜಮಾದಾರ, ಈರಣ್ಣಾ ಮಠಪತಿ, ಬಸವರಾಜ ಗಂಗರಡ್ಡಿ, ಸಂತೋಷ ಚನ್ನಮೇತ್ರಿ, ಚೇತನ ಜಕಾತಿ, ಶಿವಾನಂದ ಪಟ್ಟಣಶೆಟ್ಟಿ, ಅರುಣ ಪಟ್ಟೇದ, ಸದಾನಂದ ಪಾಟೀಲ, ಕೃಷ್ಣಮೂರ್ತಿ ತೊರಗಲ್, ಬಸವರಾಜ ದೇವರಡ್ಡಿ, ಈರಣ್ಣಾ ಪೂಜೇರ, ಈರಣ್ಣಾ ಪಟ್ಟಣಶೆಟ್ಟಿ, ಸತೀಶ ತಡಸಲೂರ, ವಿಕ್ರಂ ಇಂಗಳೆ, ಗೀರೀಶ ಪಾಟೀಲ, ಗೋವಿಂದಗೌಡ ದೇವರಡ್ಡಿ, ಪ್ರಮೋದ ಬಡಿಗೇರ, ಮಹಾಂತೇಶ ಕರ್ಜಗಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.