ಸೆಪ್ಟಿಕ್ ಟ್ಯಾಂಕ್ ಸ್ವಚ್ಛತಾ ವಾಹನ ಇಲ್ಲದೆ ಹಾರೂಗೇರಿ ಜನ ಸಂಕಷ್ಟದಲ್ಲಿ

ಸೆಪ್ಟಿಕ್ ಟ್ಯಾಂಕ್ ಸ್ವಚ್ಛತಾ ವಾಹನ ಇಲ್ಲದೆ ಹಾರೂಗೇರಿ ಜನ ಸಂಕಷ್ಟದಲ್ಲಿ People of Harugeri are in trouble without a septic tank cleaning vehicle

ಲೋಕದರ್ಶನ ವರದಿ 

ಹಾರೂಗೇರಿ 16 : ಹಾರೂಗೇರಿ ಪುರಸಭೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಸೌಲಭ್ಯ ಇಲ್ಲದಿರುವುದರಿಂದ ಗಂಭೀರ ನೈರ್ಮಲ್ಯ ಮತ್ತು ಆರೋಗ್ಯ ಸಮಸ್ಯೆ ನಾಗರಿಕರನ್ನು ಕಾಡುತ್ತಿದೆ. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಸಹನೀಯ ದುರ್ವಾಸನೆ ಉಂಟಾಗುತ್ತಿದೆ. ಹಲವೆಡೆ ಶೌಚಾಲಯಗಳ ಸೆಪ್ಟಿಕ್ ಟ್ಯಾಂಕ್‌ಗಳು ತುಂಬಿ ಗಬ್ಬೆದ್ದು ನಾರುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವುದ ಜೊತೆಗೆ ದುರ್ವಾಸನೆ ಮತ್ತು ರೋಗ ಹರಡುವಿಕೆಗೆ ಆಹ್ವಾನ ನೀಡುವಂತಾಗಿದೆ. 

ಪುರಸಭೆಯ 23 ವಾರ್ಡ್‌ಗಳಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಶೌಚಾಲಯಗಳಿವೆ. ಆದರೆ ಅವುಗಳನ್ನು ಸ್ವಚ್ಛ ಮಾಡುವ ಯಂತ್ರಚಾಲಿತ ವಾಹನ ವ್ಯವಸ್ಥೆ ಗುಜರಿಯಾಗಿದ್ದರಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಸಂಸ್ಥೆಗಳ ಸೆಪ್ಟಿಕ್ ಟ್ಯಾಂಕ್‌ಗಳು ತುಂಬಿದಾಗ ಅವುಗಳನ್ನು ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸುವುದು ಅಗತ್ಯವಾಗಿದ್ದು, ಪುರಸಭೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಕೊರತೆಯಿಂದ ಜನ ಪರದಾಡುವಂತಾಗಿದೆ. 

ಕಟ್ಟುನಿಂತ ಯಂತ್ರ : ಲಕ್ಷ್ಯಾಂತರ ರೂ. ಖರ್ಚುಮಾಡಿ, ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿದ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವಾಹನ ಕಳೆದ ಮೂರು ವರ್ಷಗಳಿಂದ ನೀರಾವರಿ ಇಲಾಖೆಯಲ್ಲಿ ಧೂಳು ತಿನ್ನುತ್ತಿದೆ. ಅಧಿಕಾರಿಗಳು ಅದನ್ನು ದುರಸ್ತಿ ಮಾಡಿಸುವ ಗೋಜಿಗೂ ಹೋಗಿಲ್ಲ. ಬದಲಾಗಿ ಮತ್ತೊಂದು ವಾಹನದ ವ್ಯವಸ್ಥೆಯನ್ನೂ ಮಾಡದಿರುವುದರಿಂದ ನಾಗರಿಕರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಖಾಸಗಿ ಮೊರೆ, ದುಪ್ಪಟ್ಟು ಹಣ : ಹಾರೂಗೇರಿಯಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಯಂತ್ರ ಸೌಲಭ್ಯವಿಲ್ಲದಿರುವುದರಿಂದ ಅನಿವಾರ್ಯವಾಗಿ ಅಥಣಿ, ಗೋಕಾಕ, ತೇರದಾಳ ಪಟ್ಟಣಗಳ ಮೊರೆ ಹೋಗುವಂತಾಗಿದೆ. ಖಾಸಗಿ ವಾಹನಗಳನ್ನು ತರಿಸಿಕೊಳ್ಳಲು ದುಪ್ಪಟ್ಟು ಹಣ ವ್ಯಯಿಸಬೇಕಾಗಿದೆ. ಇದರಿಂದ ಬಡವರು, ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿದೆ.  ಹತ್ತಾರು ಗ್ರಾಮಗಳಿಗೆ ಇದೊಂದೆ ಆಸರೆ : ಪಟ್ಟಣದ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರೂ ಶೌಚಾಲಯ ಸ್ವಚ್ಛತೆಗಾಗಿ ಹಾರೂಗೇರಿಯನ್ನೇ ಅವಲಂಭಿಸಿದ್ದು, ಅದು ಕೆಟ್ಟು ನಿಂತಿದ್ದರಿಂದ ಗ್ರಾಮಗಳ ನಿವಾಸಿಗಳೂ ಚಿಂತೆಗೀಡಾಗಿದ್ದಾರೆ.