ಚಳಿಗೆ ಜನ ಗಢ ಗಢ : ಮೈಕೊರೆಯುವ ಚಳಿಗೆ ಥಂಡ ಹೊಡೆದ ಗಣಿನಾಡು ಜನ

ಚಳಿಗೆ ಜನ ಗಢ ಗಢ : ಮೈಕೊರೆಯುವ ಚಳಿಗೆ ಥಂಡ ಹೊಡೆದ ಗಣಿನಾಡು ಜನ  People are freezing cold: The people of Gani Nadu are freezing cold

                                  ಕಂಪ್ಲಿ 21:  ಬಿಸಿಲನಾಡು ಬಳ್ಳಾರಿ ಗಣಿನಾಡು" ಎಂಬ ಪ್ರಸಿದ್ಧಿ ಹೊಂದಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ವಾತಾವರಣದಲ್ಲಿ ವ್ಯತ್ಯಸ ಉಂಟಾದ ಪರಿಣಾಮ ಈಗ ಮಂಜುಗಟ್ಟುವ ವಿಪರೀತ ಚಳಿಗೆ ನಾಣಿನಾಡಿನ ಜನ ಥಂಡ ಹೊಡೆದಿದ್ದಾರೆ. ಬೇಸಿಗೆಯಲ್ಲಿ ಉರಿ ಉರಿ ಬಿಸಿಲಿಗೆ ಜನರು ಹೇಗಪ್ಪಾ ಜೀವನ ಮಾಡಬೇಕೆಂಬ ಕೊರಗು ಪ್ರತಿಬಾರಿ ಕಾಣಿಸುತ್ತದೆ. ಆದರೆ, ಚಳಿಯಲ್ಲಿ ಜನರ ದೇಹ ನಡುಗಿಸುವಂತಾಗಿದ್ದು, ಇದರ ನಡುವೆ ಬದುಕು ಸಾಗಿಸುವ ಅನಿವಾರ್ಯತೆ ಜನರದ್ದಾಗಿದೆ. ಹೊಸ್ತಲಿ ಹುಣ್ಣಿಮೆಗೆ ಹೊಸ್ತಿಲು ನಡುಗುವಷ್ಟು ಚಳಿ ನಿರ್ಮಾಣವಾಗಿರುತ್ತದೆ ಎನ್ನುವ ವಾಡಿಕೆ ಇದೆ. ಆದರೆ, ಈ ಸಲ ಛಟ್ಟಿ ಅಮಾವಾಸೆಯ ಒತ್ತಿಗೆ ವಿಪರೀತ ಚಳಿ ಕಾಣಿಸಿಕೊಂಡಿದ್ದು, ಜನರು ಬಿಸಿಲು ಕಾಣಿಸಿಕೊಳ್ಳುವವರೆಗೆ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

                        ಕಂಪ್ಲಿ ತಾಲೂಕು ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ವಾತಾವರಣ ಬದಲಾವಣೆಗೊಂಡಿದ್ದು ಕರಳು ನಡುಗಿಸುವಂತೆ ವಿಪರೀತ ಚಳಿ ಪ್ರಾರಂಭಗೊಂಡ ಪರಿಣಾಮವಾಗಿ ದಿನನಿತ್ಯ ಮನೆಯಿಂದ ಹೊರಗಡೆ ಹೋಗಬೇಕಾದರೆ ವೇಷಗಳು ಬದಲುಗೊಳ್ಳುತ್ತಿವೆ. ತೆಳ್ಳನೆಯ ಬಟ್ಟೆಗಳು ಮನೆ ಸೇರಿದ್ದರೆ, ಮನೆಯಲ್ಲಿದ್ದ ಸ್ವೇಟರ್‌ಗಳು ಹೊರಬಂದು ದೇಹಕ್ಕೆ ಬೆಚ್ಚಗಿನ ಕಾವು ನೀಡುವ ಮೂಲಕ ಚಳಿಯಿಂದ ರಕ್ಷಿಸುವ ಪಾತ್ರ ನಿರ್ವಹಿಸುತ್ತಿವೆ. ಈಗ ರಾತ್ರಿ ಅವಧಿ ಹೆಚ್ಚಿದ್ದು ದೇಹ ತಂಪಾಗಿಸಿ ಮೈಜುಮ್ಮೆನ್ನಿಸುವ ಚಳಿಯು ವಿಪರೀತಗೋಳ್ಳುತ್ತಿದೆ. ಸಧ್ಯ ಚಳಿಯಿಂದ ದೇಹವನ್ನು ರಕ್ಷಿಸುವಂತ ಉಣ್ಣೆ ಬಟ್ಟೆಗೆ ಮಾರುಹೋಗುವಂತಾಗಿದೆ. ಸಂಜೆಯಾಗುತ್ತಲೇ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಬೆಂಕಿ ಕಾಯಿಸುವ ಮೂಲಕ ಮೈಬಿಸಿ ಮಾಡಿಕೊಳ್ಳಲು ಮುಂದಾಗಿರುವುದು ಕಂಡು ಬಂತು. ಕಳೆದ ಒಂದು ವಾರದಿಂದ ವಿಪರೀತ ಚಳಿ ಇದ್ದು, ಬಿಸಿಲೂರಿನ ಜನ ಮೈಕೊರೆಯುವ ಚಳಿಗೆ ಗಡ ಗಡ ನಡಗುತ್ತಿದ್ದಾರೆ.

                     ಬೆಳಗಿನ ಜಾವ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಚಳಿಯಲ್ಲಿ ಕೆಲಸಕ್ಕೆ ಹೋಗಲು ಕೊಂಚ ಹಿಂಜರಿಯುತ್ತಿದ್ದಾರೆ. ವ್ಯಾಪಾರಸ್ಥರು ಗ್ರಾಹಕರು ಬರುವ ವರೆಗೂ ಹುಲ್ಲು, ಕಾಗದ ಕಸವನ್ನು ಒಂದೆಡೆ ಸೇರಿಸಿ ಬೆಂಕಿ ಹಚ್ಚಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವವರ ಸಂಖ್ಯೆ ಕ್ಷೀಣಿಸಿದೆ. ಕೆಲವರು ಸ್ವೆಟರ್ ಹಾಗೂ ತಲೆಗೆ ಟೊಪ್ಪಿಗೆ ಧರಿಸಿಕೊಂಡು ಸ್ವಲ್ಪ ಹೊತ್ತು ನಡೆದು ಬೇಗ ಮನೆ ಸೇರಿಕೊಳ್ಳುತ್ತಿದ್ದಾರೆ. ಮಕ್ಕಳು ಸಹ ಸ್ವೆಟರ್ ಧರಿಸಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಸ್ಟೇಟರ್, ರೂಮಾಲು ಮಾರಾಟ : ಕೆಲ ದಿನದಿಂದ ಶೀತ, ಗಾಳಿಗೆ ಜನರು ಬೆಚ್ಚಿಬಿದ್ದಿದ್ದು, ಮುಂದಿನ ದಿನದಲ್ಲಿ ಮತ್ತಷ್ಟು ಚಳಿ ಬೀಳುವ ಸಂಬಂಧ ಜನರು ಸ್ವೇಟರ್, ರುಮಾಲುಗಳ ಮೊರೆ ಹೋಗಿದ್ದಾರೆ. ಕಂಪ್ಲಿ ಪುರಸಭೆ ಮುಂಭಾಗ, ಪಕ್ಕದಲ್ಲಿರುವ ಎಲ್ಲ ಬಟ್ಟೆ ಅಂಗಡಿಗಳಲ್ಲಿ ಸೇಟರ್, ರೂಮಾಲು, ಮಂಕಿಕ್ಯಾಪ್ ಸೇರಿದಂತೆ ಬೆಚ್ಚಗಿನ ವಿವಿಧ ಉಡುಪುಗಳಿಗೆ ಬೇಡಿಕೆ ಹೆಚ್ಚಿಸಿದೆ. ಇತ್ತಾ ಕೌದಿ ತಯಾರಿಕೆಗೂ ಬೇಡಿಕೆ ಹೆಚ್ಚಾಗಿದೆ. ತತ್ತರಿಸುವ ಚಳಿಯ ಃ ಹವಾಮಾನದ ವೈಪರಿತ್ಯದಿಂದಲೋ ಏನೋ ತಾಲೂಕಿನಾದ್ಯಂತ ನಸುಕಿನಲ್ಲಿ ಬಿಳುತ್ತಿರುವ ವಿಪರೀತ ಚಳಿ ಬೆಳಗಿನ ಎಂಟು ಗಂಟೆಯವರೆಗೂ ಜನತೆಯನ್ನು ಮೈನಡಗುವಂತೆ ಮಾಡುತ್ತಿದೆ.

                     ಸಂಜೆಯಾಗುತ್ತಿದ್ದಂತೆ ಕೊರೆಯುವ ಚಳಿ ಆರಂಭಗೊಳ್ಳುತ್ತಿದ್ದು, ರಾತ್ರಿ ಹೊಲಕ್ಕೆ ನೀರು ಹಾಯಿಸುವ ರೈತರಿಗೂ ಹಾಗೂ ಜಮೀನುಗಳಲ್ಲಿ ವಾಸ ಮಾಡುವ ಕುರಿಗಾರರು ಚಳಿಯಿಂದ ತತ್ತರಿಸಿದ್ದಾರೆ. ಬಿಸಿ ಬಿಸಿ ಚಹಾಕ್ಕೆ ಮೊರೆ : ಪಟ್ಟಣ ಮತ್ತು ವಿವಿಧ ಗ್ರಾಮಗಳಲ್ಲಿರುವ ಚಹಾದ ಅಂಗಡಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಬಿಸಿ ಬಿಸಿಯಾದ ಚಹಾ ಕುಡಿಯುವುದಿಂದ ಮೈಬಿಸಿಯಾಗುತ್ತದೆ. ಆದ್ದರಿಂದ ಚಹಾ ಅಂಗಡಿಗಳಲ್ಲಿ ಬೆಳಗಿನ ಜಾವ ಮತ್ತು ಸಂಜೆ ಒತ್ತದಲ್ಲಿ ಚಹಾ ಕುಡಿಯುವದುಂಟು.  ಒಟ್ಟಿನಲ್ಲಿ ತಾಲೂಕಿನಾದ್ಯಂತ ಬೆಳಗಿನ ಮತ್ತು ಸಂಜೆ ಅವಧಿಯಲ್ಲಿ ಹೆಚ್ಚಿರುವ ಚಳಿಯಿಂದ ದೇಹ ರಕ್ಷಣೆಗೆ ಜನತೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.