ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ

ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ Passage of bills in the Legislative Assembly
ಬೆಳಗಾವಿ ಸುವರ್ಣಸೌಧ ಡಿ.17: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆ ಕಲಾಪದಲ್ಲಿ 5 ಪ್ರಮುಖ ವಿಧೇಯಕಗಳಿಗೆ ಅಂಗೀಕಾರ ದೊರಕಿತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2025ನೇ ಸಾಲಿನ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧೀಕಾರ ತಿದ್ದುಪಡಿ ವಿಧೇಯಕಕ್ಕೆ ಸಭೆಯ ಅಂಗೀಕಾರ ಕೋರಿ ಪರ್ಯಾಲೋಚನೆ ತಂದರು.

2022 ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಧಿನಿಯಮ (2023ರ ಕರ್ನಾಟಕ ಅಧಿನಿಯಮ 06)ರಲ್ಲಿರುವ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮತ್ತು ಕಾರ್ಯಕಾರಿ ಸಮಿತಿಯನ್ನು ಪರಿಷ್ಕರಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರು ಮತ್ತು ಆಯುಕ್ತರನ್ನು ಮತ್ತು 2024ರ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮದ ಅನುಷ್ಠಾನದ ತತ್ಪರಿಣಾಮವಾಗಿ ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಪಾಲಿಕೆಗಳನ್ನು ಸೇರಿಸಲು ತಿದ್ದುಪಡಿ ತರಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪರವಾಗಿ ಕಾನೂನು, ಶಾಸನ ರಚನೆ ಹಾಗೂ  ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ 2025ನೇ ಸಾಲಿನ ಬಾಂಬೆ ಸಾರ್ವಜನಿಕ ನ್ಯಾಸ(ಕರ್ನಾಟಕ ತಿದ್ದುಪಡಿ) ವಿಧೇಯಕ ಮತ್ತು 2025ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕಗಳು ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಪರವಾಗಿ 2025ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಎರಡನೇ ತಿದ್ದುಪಡಿ ವಿಧೇಯಕಕ್ಕೆ ಸಭೆಯ ಅಂಗೀಕಾರ ಕೋರಿ ಪರ್ಯಾಲೋಚನೆಗೆ ತಂದರು.

1950ರ ಬಾಂಬೆ ಸಾರ್ವಜನಿಕ ನ್ಯಾಸ ಅಧಿನಿಯಮಕ್ಕೆ ತಿದ್ದುಪಡಿ ತಂದು ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಧರ್ಮಾದಾಯ ಆಯುಕ್ತರನ್ನಾಗಿ, ಜಿಲ್ಲಾಧಿಕಾರಿಯನ್ನು ಜಂಟಿ ಧರ್ಮಾದಾಯ ಆಯುಕ್ತರನ್ನಾಗಿ ಹಾಗೂ ಸಂಬಂಧÀಪಟ್ಟ ಉಪವಿಭಾಗದ ಉಪವಿಭಾಗಾಧಿಕಾರಿಯನ್ನು ಉಪ ಧರ್ಮಾದಾಯ ಆಯುಕ್ತರನ್ನಾಗಿ ಹಾಗೂ ಸಂಬಂದಪಟ್ಟ ತಹಶೀಲ್ದಾರನ್ನು ಸಹಾಯಕ ಧರ್ಮಾದಾಯ ಆಯುಕ್ತರನ್ನಾಗಿ ಪದನಾಮಿಸಲು ತಿದ್ದುಪಡಿ ತರಲಾಗಿದೆ.

2025ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ವಾಹನಗಳ ನೋಂದಣಿ ಮಾಡುವ ಸಮಯದಲ್ಲಿ ಒಂದು ಬಾರಿಯ ಸೆಸ್ ಅನ್ನು ಹೆಚ್ಚಿನ ಮಿತಿಯಲ್ಲಿ ವಿಧಿಸುವುದನ್ನು ಮತ್ತು ಸಂಗ್ರಹಿಸುವುದನ್ನು ಬಿಟ್ಟುಬಿಡುವುದಕ್ಕಾಗಿ ತಿದ್ದುಪಡಿ ತರಲಾಗಿದೆ.

2025ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಿರ್ದೇಶಕರು, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಮತ್ತು ಮುಖ್ಯ ನಗರ ಯೋಜಕರನ್ನು ಸದಸ್ಯರನ್ನಾಗಿ ನೇಮಿಸಲು ತಿದ್ದುಪಡಿ ತರಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.  

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಗ್ರಿ ಕರ್ನಾಟಕ ತಿದ್ದುಪಡಿ ವಿಧೇಯಕವನ್ನು ತಿದ್ದುಪಡಿಗಳೊಂದಿಗೆ ಸಭೆ ಅಂಗೀಕಾರ ಕೋರಿ ಪರ್ಯಾಲೋಚನೆ ತಂದರು.1940ರ ಔಷಧ ಮತ್ತು ಪ್ರಸಾಧನ ಸಾಮಗ್ರಿ ಕೇಂದ್ರ ಅಧಿನಿಯಮಕ್ಕೆ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ, ಕೇಂದ್ರ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ರಾಜ್ಯದಲ್ಲಿ ಕೇಂದ್ರ ಔಷಧಗಳ ಪ್ರಯೋಗಾಲಯ ಸ್ಥಾಪಿಸಿ, ಅದರ ನಿರ್ದೇಶಕರ ಪ್ರಕಾರ್ಯಗಳನ್ನು ಅನುಕ್ರಮವಾಗಿ ರಾಜ್ಯ ಸರ್ಕಾರ ನಿರ್ಧಿಷ್ಟ ಪಡಿಸಬಹುದಾದ ಪ್ರಾಧಿಕಾರ ಮತ್ತು ಅಧಿಕಾರಿ ನಿರ್ವಹಿಸಲು ಅಧಿಕಾರ ನೀಡಲು ತಿದ್ದುಪಡಿ ತರಲಾಗಿದೆ. ಇದರೊಂದಿಗೆ ಕಲಬೆರೆಕೆ ಔಷಧಗಳ ಪ್ರಕರಣಗಳಲ್ಲಿ ಕಲಬೆರೆಕೆ ಔಷಧಗಳನ್ನು ಯಾರಿಂದ ವಶಪಡಿಸಿಕೊಳ್ಳಲಾಗಿದೆಯೋ, ಅವರೇ ಕಲಬೆರಿಕೆ ವಸ್ತುಗಳ ತಯಾರಕರು ಯಾರೆಂದು ಹಾಗೂ ತಾವು ತಯಾರಿಸಿಲ್ಲ ಎನ್ನುವ ರುಜುವಾತುಪಡಿಸುವ ಭಾರವನ್ನು ತಿದ್ದುಪಡಿ ವಿಧೇಯದಲ್ಲಿ ತರಲಾಗಿದೆ. ಪ್ರಕರಣ 30ರ ಅಡಿ ದಂಡನೆಗಳನ್ನು ಜೀವಾವಧಿ ಕಾರಾವಾಸಕ್ಕೆ ಹೆಚ್ಚಿಸಲು ಮತ್ತು ಕಲಬೆರೆಕೆ ಅಪರಾಧಗಳನ್ನು ಜಾಮೀನು ರಹಿತ ಪ್ರಕರಣಗಳೆಂದು ಪರಿಗಣಿಸಲು ಹಾಗೂ ಇತರೆ ನಿಯಮಗಳನ್ನು ರಚಿಸಲು ತಿದ್ದುಪಡಿಯನ್ನು ವಿಧೇಯಕದಲ್ಲಿ ತರಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಚರ್ಚೆಯ ಬಳಿಕ ವಿಧಾನಸಭೆಯಲ್ಲಿ 5 ತಿದ್ದುಪಡಿ ವಿಧೇಯಕಗಳಿಗೆ ಅನುಮೋದಿಸಿ ಅಂಗೀಕಾರ ನೀಡಲಾಯಿತು.