ಜನಸೇವೆ ಮೂಲಕ ಪಕ್ಷದ ಸಂಸ್ಥಾಪನಾ ದಿನಾಚರಣೆ: ತಾಹೀರ್ ಹುಸೇನ್

ಬೆಂಗಳೂರು, ಏ.18 ,ಮೌಲ್ಯಾಧಾರಿತ ರಾಜಕೀಯದಡಿ ಆರಂಭವಾದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಇಂದು ಒಂಬತ್ತನೇ ವರ್ಷದ ಸಂಸ್ಥಾಪನೆ ದಿನಾಚರಣೆಯಾಗಿದೆ. ಈ  ಬಾರಿ ಸಂಸ್ಥಾಪನಾ ದಿನಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸದೆ ಲಾಕ್ ಡೌನ್ ನಿಂದ  ಸಂಕಷ್ಟ ಅನುಭವಿಸುವ ಜನರ ಸೇವೆ ಮಾಡುವ ಮೂಲಕ ಆಚರಿಸಲು ಪಕ್ಷವು ತೀರ್ಮಾನಿಸಿದೆ.   ವೆಲ್ಫೇರ್ ಪಾರ್ಟಿಯ ಕಾರ್ಯಕರ್ತರು ರಾಜ್ಯಾದ್ಯಂತ ಈಗಾಗಲೇ ಸಕ್ರಿಯವಾಗಿ ಜನಸೇವೆಯಲ್ಲಿ  ತೊಡಗಿಸಿಕೊಂಡಿರುತ್ತಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್  ಹುಸೇನ್  ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,  ಅಪರಾಧ, ಭ್ರಷ್ಟಾಚಾರ, ಸ್ವಾರ್ಥ ಹಿತಾಸಕ್ತಿಯಂತಹ ಸಂಕುಚಿತ ಪಕ್ಷಪಾತಗಳಿಂದ ಮುಕ್ತ, ಉನ್ನತ ನೈತಿಕ ಮೌಲ್ಯಾಧಾರಿತ ರಾಜಕೀಯವನ್ನು ಪಕ್ಷವು  ದೇಶದಲ್ಲಿ ಪ್ರೋತ್ಸಾಹಿಸಲು ಬಯಸುವುದು. ಅದಕ್ಕಾಗಿ ವಿಚಾರಣೆ ಮತ್ತು ಜವಾಬ್ದಾರಿಕೆಯ  ವ್ಯವಸ್ಥೆಯನ್ನು ಚುರುಕುಗೊಳಿಸಬೇಕಾಗಿದೆ. ಅಧಿಕಾರವು ದೊಡ್ಡದಾದಂತೆ ಜವಾಬ್ದಾರಿಕೆ,  ಉತ್ತರದಾಯಿತ್ವವೂ ಹೆಚ್ಚಾಗಬೇಕು. ನಿಷ್ಕಳಂಕ ಚಾರಿತ್ರ್ಯ ರಾಜಕೀಯ ಪ್ರಾತಿನಿಧ್ಯಕ್ಕೆ ಮೂಲಶರ್ತವಾಗಬೇಕು ಎಂದು ಅವರು ತಿಳಿಸಿದ್ದಾರೆ.
ಪಕ್ಷವು  ಒಂದು ಕಲ್ಯಾಣ ರಾಷ್ಟ್ರಕ್ಕಾಗಿ ಶ್ರಮಿಸುತ್ತಿರುವುದು. ಪಕ್ಷದ ದೃಷ್ಟಿಯಲ್ಲಿ ಆಹಾರ,  ಉಡುಪು, ಮನೆ, ಆರೋಗ್ಯ ಹಾಗೂ ಪ್ರಾಥಮಿಕ ಶಿಕ್ಷಣ ಪ್ರತಿಯೊಬ್ಬ ನಾಗರಿಕನ ಮೂಲಭೂತ ಮಾನವೀಯ  ಹಕ್ಕುಗಳಲ್ಲಿ ಸೇರಿವೆ. ನಾಗರಿಕರ ಈ ಮೂಲಭೂತ ಅವಶ್ಯಕತೆಗಳ ಈಡೇರಿಕೆ ಒಂದು ಕಲ್ಯಾಣ  ರಾಷ್ಟ್ರದ ಹೊಣೆಗಾರಿಕೆಗಳಲ್ಲಿ ಸೇರಿದೆ.
ಅದೇ  ರೀತಿ ಕಳೆದ ಪ್ರಕೃತಿ ವಿಕೋಪದ ಸಂಧರ್ಭ ಮತ್ತು ನೆರೆಹಾವಳಿಯ ಸಮಯದಲ್ಲಿ ಯಾವುದೇ ಒಂದು  ಆಡಳಿತ  ನಡೆಸುತ್ತಿದ್ದ ರಾಜಕೀಯ ಪಕ್ಷಗಳಿಗಿಂತಲೂ ಮೀರಿ ಕೆಲಸ ಮಾಡಿದೆ ಎಂದು  ಹೆಮ್ಮೆಯಿಂದ ಹೇಳುವುದರಲ್ಲಿ ಮುಜುಗರವಿಲ್ಲ. ಪಕ್ಷದ  ಕಾರ್ಯಕರ್ತರು ಬೆಳಗಾವಿ,ಬಾಗಲಕೋಟೆ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ  ಪ್ರಕೃತಿ ವಿಕೋಪ ನಡೆದ ಸ್ಥಳಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.ಕೊಡಗು  ಜಿಲ್ಲೆಯಲ್ಲಿ  ಪ್ರವಾಹದಿಂದ ಮನೆ ಕಳೆದು ಕೊಂಡ ಹಲವು ಕುಟುಂಬಗಳಿಗೆ ಹೆಚ್ ಆರ್ ಎಸ್  ಸಂಘಟನೆಯೊಂದಿಗೆ ಸೇರಿ ಸುಮಾರು 50 ಮನೆಗಳಿಗೆ ಶಿಲಾನ್ಯಾಸ ನಡೆಸಿದೆಯಲ್ಲದೆ ಆ ಜಿಲ್ಲೆಯ  ಮಡಿಕೇರಿ ಮತ್ತು ಸಿದ್ದಾಪುರದಲ್ಲಿ ಸಂತ್ರಸ್ತರಿಗೆ 6ತಿಂಗಳವರೆಗೆ ರಿಲೀಫ್ ಸೆಲ್ಲನ್ನು  ರಚಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಇದೀಗ ಪಕ್ಷದ  ಸಂಸ್ಥಾಪನೆ ದಿವಸದಂದು ಲಾಕ್ ಡೌನ್ ಆಗಿರುವುದರಿಂದ ಆರೋಗ್ಯಾಧಿಕಾರಿಗಳ ಮತ್ತು ನಿಯಮ  ಪಾಲಕರ ಎಲ್ಲಾ ನಿರ್ದೇಶನಗಳನ್ನು ಪಾಲುಸುತ್ತಾ ಇನ್ನಷ್ಟು ಜನಸೇವೆ ಮಾಡುವ ಮೂಲಕ ಆಚರಿಸೋಣ  ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.