ಗ್ರಾಮೀಣ ಕಾಲೇಜುಗಳ ಅಭಿವೃದ್ಧಿಗೆ ಸಹಭಾಗಿತ್ವ ಅಗತ್ಯ

ಗ್ರಾಮೀಣ ಕಾಲೇಜುಗಳ ಅಭಿವೃದ್ಧಿಗೆ ಸಹಭಾಗಿತ್ವ ಅಗತ್ಯ Partnership is essential for the development of rural colleges

ಲೋಕದರ್ಶನ ವರದಿ 

ಹೂವಿನ ಹಡಗಲಿ 07 : ಗ್ರಾಮೀಣ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರದ ಪ್ರಯತ್ನಗಳ ಜೊತೆಗೆ ಸಮಾಜದ ಸಕ್ರಿಯ ಸಹಭಾಗಿತ್ವವೂ ಅಗತ್ಯವಾಗಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಉಪಾಧ್ಯಕ್ಷ ಕೆ.ಜಿ. ಜಗದೀಶ್ ಹೇಳಿದರು.ಗುರುವಾರ ತಾಲೂಕಿನ ಸೋಗಿ ಗ್ರಾಮದ ಪಟ್ಟೇದ ಸಿದ್ಧಮಲ್ಲಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಆಯೋಜಿಸಿದ್ದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ  ಆತ್ಮವಿಶ್ವಾಸ ಮೂಡುವುದರ ಜೊತೆಗೆ ಶಿಕ್ಷಣದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮದ ಶಿಕ್ಷಣಾಭಿಮಾನಿಗಳು  ನೀಡಿದ ದೇಣಿಗೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು. ಅಧ್ಯಕ್ಷತೆ  ಪ್ರಾಂಶುಪಾಲೆ ಜ್ಯೋತಿ ಎಸ್‌. ಮಾತನಾಡಿ ಶಿಕ್ಷಣದ ಮೂಲಕ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯ ರೂಪಿಸಲು ಇಂತಹ ಸಹಭಾಗಿತ್ವದ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿನಯ್, ಕೋಟ್ರೇಶ್, ಲಕ್ಕಪ್ಪ ಹಾಗೂ ಪ್ರಶಾಂತ್, ಪ್ರಾಂಶುಪಾಲೆ ಜ್ಯೋತಿ ಎಸ್‌., ಉಪನ್ಯಾಸಕರಾದ ವೆಂಕಟೇಶ್, ನರೇಶ್, ಜಯಪ್ರಕಾಶ್, ನಟರಾಜ್ ಹಾಗೂ ನೇತ್ರಾವತಿ ಇದ್ದರು.