ಜನನ-ಮರಣ ನೋಂದಣಿ ವಿಳಂಬಕ್ಕೆ ಕಠಿಣ ನಿಯಮ: ತಿದ್ದುಪಡಿ ಮಸೂದೆಗೆ ಸಂಸತ್ ಅನುಮೋದನೆ

ಜನನ-ಮರಣ ನೋಂದಣಿ ವಿಳಂಬಕ್ಕೆ ಕಠಿಣ ನಿಯಮ: ತಿದ್ದುಪಡಿ ಮಸೂದೆಗೆ ಸಂಸತ್ ಅನುಮೋದನೆ Parliament Passes Bill Tightening Rules for Delayed Birth, Death Registrations

ನವದೆಹಲಿ, ಆ. 4: ಅಧಿಕೃತ ದಾಖಲೆಗಳಲ್ಲಿ ನಕಲಿ ದಾಖಲೆಗಳನ್ನು ತಡೆಗಟ್ಟುವ ಉದ್ದೇಶದಿಂದ, ಜನನ ಮತ್ತು ಮರಣಗಳ ವಿಳಂಬಿತ ನೋಂದಣಿಗೆ ಕಠಿಣ ಕಾನೂನು ಪರಿಶೀಲನೆ ಕಡ್ಡಾಯಗೊಳಿಸುವ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ, 2026ಕ್ಕೆ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ.

ಈ ಮಸೂದೆಗೆ ಲೋಕಸಭೆ ಕಳೆದ ಶುಕ್ರವಾರವೇ ಅನುಮೋದನೆ ನೀಡಿದ್ದರೆ, ಮಂಗಳವಾರ ರಾಜ್ಯಸಭೆಯೂ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ನಡುವೆಯೇ ಧ್ವನಿ ಮತದ ಮೂಲಕ ಅಂಗೀಕರಿಸಿತು. ಇದರಿಂದ ಮಸೂದೆ ಸಂಸತ್ತಿನ ಅಂಗೀಕಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಮಸೂದೆಯನ್ನು ಮಂಡಿಸಿ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ದೇಶದ ನಾಗರಿಕ ನೋಂದಣಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ನೈಜ ಅರ್ಜಿದಾರರಿಗೆ ಹೆಚ್ಚು ಕಟ್ಟುನಿಟ್ಟಿನ ಪರಿಶೀಲನೆಯ ಮೂಲಕ ಕಾನೂನುಬದ್ಧ ಮಾನ್ಯತೆ ದೊರೆಯುವಂತೆ ಮಾಡುವುದೇ ತಿದ್ದುಪಡಿಗಳ ಉದ್ದೇಶ ಎಂದು ಹೇಳಿದರು.

"ನೈಜ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ನೋಂದಣಿ ಪ್ರಕ್ರಿಯೆಯ ಸಮಗ್ರತೆಯನ್ನು ಬಲಪಡಿಸುವುದೇ ಈ ತಿದ್ದುಪಡಿಗಳ ಉದ್ದೇಶವಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳು ಹಲವು ಕಾನೂನು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ಮೂಲ ದಾಖಲೆಗಳಾಗಿರುವುದರಿಂದ ಅವುಗಳ ದುರುಪಯೋಗವನ್ನು ತಡೆಯಲು ಹೆಚ್ಚುವರಿ ಸುರಕ್ಷತಾ ಕ್ರಮಗಳು ಅಗತ್ಯ," ಎಂದು ಅವರು ತಿಳಿಸಿದರು.

ಈ ತಿದ್ದುಪಡಿಗಳು ಜನನ ಮತ್ತು ಮರಣ ನೋಂದಣಿ ಕಾಯ್ದೆ, 1969ಕ್ಕೆ ಸಂಬಂಧಿಸಿದ್ದು, ಜನನ ಅಥವಾ ಮರಣ ಸಂಭವಿಸಿದ ಎರಡು ವರ್ಷಗಳ ಬಳಿಕ ಸಲ್ಲಿಸಲಾಗುವ ನೋಂದಣಿ ಅರ್ಜಿಗಳಿಗೆ ಹೆಚ್ಚು ಕಠಿಣ ಕಾನೂನು ವ್ಯವಸ್ಥೆಯನ್ನು ಜಾರಿಗೆ ತರುತ್ತವೆ.

ತಿದ್ದುಪಡಿ ಪ್ರಕಾರ, ಘಟನೆ ನಡೆದ ಒಂದು ವರ್ಷದಿಂದ ಎರಡು ವರ್ಷಗಳೊಳಗೆ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿತ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ (ಎಸ್‌ಡಿಎಂ) ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಅನುಮೋದನೆ ಮುಂದುವರಿಯಲಿದೆ.

ಆದರೆ, ಎರಡು ವರ್ಷಗಳಿಗಿಂತ ಹೆಚ್ಚು ವಿಳಂಬವಾಗಿ ಸಲ್ಲಿಸುವ ಅರ್ಜಿಗಳಿಗೆ ಇನ್ನು ಮುಂದೆ ಕಾರ್ಯನಿರ್ವಾಹಕ ಅಧಿಕಾರಿಯ ಬದಲಿಗೆ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರ ಆದೇಶ ಕಡ್ಡಾಯವಾಗಲಿದೆ. ಈ ಜವಾಬ್ದಾರಿಯನ್ನು ನ್ಯಾಯಾಂಗಕ್ಕೆ ವರ್ಗಾಯಿಸುವುದರಿಂದ ಹೆಚ್ಚಿನ ಕಾನೂನು ಪರಿಶೀಲನೆ ಸಾಧ್ಯವಾಗಲಿದ್ದು, ನಕಲಿ ಅಥವಾ ಕೃತಕ ದಾಖಲೆಗಳು ಅಧಿಕೃತ ದಾಖಲಾತಿಗಳಲ್ಲಿ ಸೇರುವ ಸಾಧ್ಯತೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಪ್ರತಿ ವಿಳಂಬಿತ ನೋಂದಣಿ ಪ್ರಕರಣದಲ್ಲೂ ವಾಸ್ತವಾಂಶಗಳ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಸಂಬಂಧಿತ ಪ್ರಾಧಿಕಾರವು ಜನನ ಅಥವಾ ಮರಣದ ಮಾಹಿತಿ ನಿಖರ ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕವೇ ಅನುಮೋದನೆ ನೀಡಬೇಕಾಗುತ್ತದೆ.

ವಿಳಂಬಿತ ನೋಂದಣಿಗೆ ಅರ್ಜಿ ಸಲ್ಲಿಸುವವರು ಸರ್ಕಾರ ನಿಗದಿಪಡಿಸುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ವಿವರಗಳನ್ನು ನಂತರ ನಿಯಮಾವಳಿಗಳ ಮೂಲಕ ಪ್ರಕಟಿಸಲಾಗುವುದು.

ಮಸೂದೆಯ ಉದ್ದೇಶ ಮತ್ತು ಕಾರಣಗಳ ವಿವರಣೆಯಲ್ಲಿ, ಜನನ ಮತ್ತು ಮರಣ ಪ್ರಮಾಣಪತ್ರಗಳು ಕಾನೂನುಬದ್ಧ ಸಾಕ್ಷ್ಯ ದಾಖಲೆಗಳಾಗಿರುವುದರಿಂದ ಪರಿಶೀಲನಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ನಕಲಿ ನೋಂದಣಿಗಳನ್ನು ತಡೆಯಲು ಹಾಗೂ ನೈಜ ಪ್ರಕರಣಗಳಿಗೆ ಸೂಕ್ತ ಪರಿಶೀಲನೆಯ ಬಳಿಕ ಕಾನೂನು ಮಾನ್ಯತೆ ನೀಡಲು ಈ ತಿದ್ದುಪಡಿಗಳು ನೆರವಾಗಲಿವೆ ಎಂದು ತಿಳಿಸಲಾಗಿದೆ.

ನಿಗದಿತ 21 ದಿನಗಳೊಳಗೆ ಜನನ ಮತ್ತು ಮರಣಗಳ ನೋಂದಣಿಯನ್ನು ಉತ್ತೇಜಿಸುವ ಮೂಲಕ ದೇಶದ ನಾಗರಿಕ ನೋಂದಣಿ ವ್ಯವಸ್ಥೆಯ ಸಂಪೂರ್ಣತೆ, ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಈ ತಿದ್ದುಪಡಿಗಳು ಸಹಕಾರಿಯಾಗಲಿವೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

1969ರ ಕಾಯ್ದೆಯಡಿ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದೆ. ಜನನ ಪ್ರಮಾಣಪತ್ರವು ಶಾಲಾ ಪ್ರವೇಶ, ಪಾಸ್‌ಪೋರ್ಟ್, ಆಧಾರ್ ನೋಂದಣಿ, ಮತದಾರರ ಪಟ್ಟಿಗೆ ಸೇರ್ಪಡೆ, ಆಸ್ತಿ ಉತ್ತರಾಧಿಕಾರ ಹಾಗೂ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಮೂಲ ಕಾನೂನು ದಾಖಲೆವಾಗಿದೆ. ಅದೇ ರೀತಿ ಮರಣ ಪ್ರಮಾಣಪತ್ರವು ಆಸ್ತಿ ಉತ್ತರಾಧಿಕಾರ, ವಿಮೆ ಪರಿಹಾರ, ಪಿಂಚಣಿ, ಆಸ್ತಿ ವರ್ಗಾವಣೆ, ಬ್ಯಾಂಕ್ ಖಾತೆ ಮುಚ್ಚುವಿಕೆ ಹಾಗೂ ಸರ್ಕಾರಿ ದಾಖಲೆಗಳ ನವೀಕರಣಕ್ಕೆ ಅಗತ್ಯವಾಗಿದೆ.

ನಾಗರಿಕ ನೋಂದಣಿ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ಡಿಜಿಟಲೀಕರಣಗೊಳಿಸಲು 2023ರಲ್ಲಿ ಸಂಸತ್ತು ಜಾರಿಗೆ ತಂದ ಮಹತ್ವದ ಸುಧಾರಣೆಗಳ ಸುಮಾರು ಮೂರು ವರ್ಷಗಳ ಬಳಿಕ ಈ ಹೊಸ ತಿದ್ದುಪಡಿ ತರಲಾಗಿದೆ. ಆ ಸುಧಾರಣೆಗಳ ಮೂಲಕ ಜನನ ಪ್ರಮಾಣಪತ್ರವನ್ನು ಶಿಕ್ಷಣ ಸಂಸ್ಥೆಗಳ ಪ್ರವೇಶ, ಚಾಲನಾ ಪರವಾನಗಿ, ಮತದಾರರ ಪಟ್ಟಿ, ಸರ್ಕಾರಿ ಉದ್ಯೋಗ ನೇಮಕಾತಿ, ವಿವಾಹ ನೋಂದಣಿ ಸೇರಿದಂತೆ ಹಲವು ಸೇವೆಗಳಿಗೆ ಏಕೈಕ ದಾಖಲೆಯಾಗಿ ಬಳಸುವ ಅವಕಾಶ ಕಲ್ಪಿಸಲಾಗಿತ್ತು.

ಆದಾಗ್ಯೂ, ವಿಳಂಬಿತ ನೋಂದಣಿಗೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದ್ದು, ಅಧಿಕೃತ ದಾಖಲೆಗಳ ಸಮಗ್ರತೆಯನ್ನು ಕಾಪಾಡುವುದು, ದುರುಪಯೋಗ ತಡೆಯುವುದು ಹಾಗೂ ವಿಳಂಬಿತ ದಾಖಲೆಗಳು ದೇಶದ ನಾಗರಿಕ ನೋಂದಣಿ ದತ್ತಾಂಶದಲ್ಲಿ ಸೇರುವ ಮುನ್ನ ಕಟ್ಟುನಿಟ್ಟಿನ ಕಾನೂನು ಪರಿಶೀಲನೆ ನಡೆಸುವುದೇ ಈ ತಿದ್ದುಪಡಿಗಳ ಪ್ರಮುಖ ಉದ್ದೇಶವಾಗಿದೆ.