ಪಂಡಿತ ಪುಟ್ಟರಾಜ ಗವಾಯಿಗಳ ಸೇವೆ ಸ್ಮರಣೀಯ: ಹನುಮಂತಗೌಡ ಗೊಲ್ಲರ

ಪಂಡಿತ ಪುಟ್ಟರಾಜ ಗವಾಯಿಗಳ ಸೇವೆ ಸ್ಮರಣೀಯ: ಹನುಮಂತಗೌಡ ಗೊಲ್ಲರ  Pandita Puttaraja Gawai's service is remembered by: Hanumantha Gowda Gollara


ಹಾವೇರಿ, ಸೆ.20: ಪಂಡಿತ ಪುಟ್ಟರಾಜ ಗವಾಯಿಗಳು ಪ್ರಶಸ್ತಿಗಾಗಿ ಕೆಲಸ ಮಾಡಲಿಲ್ಲ. ದೃಷ್ಟಿ ಇಲ್ಲದಿದ್ದರೂ ಅಂಧರ ಬದುಕಿಗೆ ಬೆಳಕಾದ ಅವರು, ತಮ್ಮ ಬದುಕನ್ನೇ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.  

ನಗರದ ಹೃದಯಭಾಗದಲ್ಲಿರುವ ಬಸವ ಭವನದಲ್ಲಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಸೇವಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 16ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಸಾವಿರಾರು ಕಣ್ಣಿಲ್ಲದ, ನಿರ್ಗತಿಕ ಹಾಗೂ ಅನಾಥ ಮಕ್ಕಳನ್ನು ಎದೆಗಪ್ಪಿಕೊಂಡು ವಿದ್ಯೆ, ಮುದ್ದು ಹಾಗೂ ಬದುಕಿನ ಭರವಸೆ ನೀಡಿದ ಪುಟ್ಟರಾಜ ಗವಾಯಿಗಳು, ಯಾವುದೇ ಪ್ರಶಸ್ತಿ-ಪುರಸ್ಕಾರಗಳ ಆಸೆ ಇಲ್ಲದೆ ಸೇವೆ ಸಲ್ಲಿಸಿದರು. ಅವರ ತ್ಯಾಗ ಮತ್ತು ಮಾನವೀಯ ಗುಣಕ್ಕೆ ಯಾವುದೇ ಗೌರವವೂ ಸಮನಾಗದು ಎಂದರು.  

ವೀರೇಶ್ವರ ಪುಣ್ಯಾಶ್ರಮವನ್ನು ವಿಶ್ವವಿದ್ಯಾಲಯವನ್ನಾಗಿ ರೂಪಿಸುವುದು ಅವರ ಮಹಾದಾಸೆಯಾಗಿತ್ತು. ಕನ್ನಡ, ಹಿಂದಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಪುರಾಣ, ನಾಟಕ, ಕಾವ್ಯ ಮತ್ತು ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ದೇಶದಾದ್ಯಂತ ಸಂಚರಿಸಿ ಕೀರ್ತನೆ, ಪುರಾಣ ಹಾಗೂ ಪ್ರವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. 30ಕ್ಕೂ ಹೆಚ್ಚು ವಾದ್ಯಗಳನ್ನು ನುಡಿಸುವ ಸಾಧಕರಾಗಿದ್ದರು ಎಂದು ತಿಳಿಸಿದರು.  

ಬಸವ ಬಳಗದ ಅಧ್ಯಕ್ಷ ವಿ.ಬಿ. ಯಳಗೇರಿ ಮಾತನಾಡಿ, ಬಸವಾದಿ ಶರಣರ ಜೀವನಾದರ್ಶಗಳನ್ನು ಪುಟ್ಟರಾಜ ಗವಾಯಿಗಳು ಅಳವಡಿಸಿಕೊಂಡಿದ್ದರು. ಪಂಚಾಕ್ಷರಿ ಗವಾಯಿಗಳ ಗುರು-ಶಿಷ್ಯ ಪರಂಪರೆಯ ಸಂಬಂಧ ಅವಿನಾಭಾವವಾಗಿತ್ತು. ಅವರ ತೂಗಾಭಾರಗಳು ಸೇರಿದಂತೆ 2,000ಕ್ಕೂ ಹೆಚ್ಚು ಕಾರ್ಯಕ್ರಮಗಳು ಗಿನ್ನಿಸ್ ದಾಖಲೆಗಳಾಗಿವೆ. ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.  

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಎಸ್‌.ಡಿ. ಮುಡೇಣ್ಣ ಅವರು ಮಾತನಾಡಿ, ತಮ್ಮ ಜೀವನದ ಶ್ರೇಷ್ಠ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ ದೊರೆತಿರುವುದು ಪುಣ್ಯ ಎಂದು ಕೃತಜ್ಞತೆ ಸಲ್ಲಿಸಿದರು.  

ಅಹಿಂದ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, ಸೇವಾ ಸಮಿತಿಯ ಕಾರ್ಯಗಳು ಹಾಗೂ ಮಹಿಳಾ ಸಂಘಟನೆಯ ಚಟುವಟಿಕೆಗಳು ಅನುಕರಣೀಯವಾಗಿವೆ. ಮಹಿಳಾ ಶಕ್ತಿ ಅತ್ಯಂತ ಪ್ರಬಲ ಶಕ್ತಿ ಎಂದರು.  

ಕಾರ್ಯಕ್ರಮದಲ್ಲಿ ಮುಂಡಗೋಡದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ರಮೇಶ ಪವಾರ, ಮಂಜುನಾಥ ಕಲಾಲ ಹಾಗೂ ಕವಯತ್ರಿ ಶೋಭಾ ಹಡಗಲಿ ಅವರನ್ನು ಸನ್ಮಾನಿಸಲಾಯಿತು. ಮಮತಾ ಮಾಕಳ ಹಾಗೂ ಅಕ್ಕಮಹಾದೇವಿ ಹಾನಗಲ್ ಗವಾಯಿಗಳ ಕುರಿತು ಹಾಡುಗಳನ್ನು ಹಾಡಿದರು.  

ಸಮಿತಿ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮುರುಗಪ್ಪ ಕಡೆಯಕೊಪ್ಪ, ಶಿವಾನಂದ ಹೊಸಮನಿ, ಶಿವಯೋಗಿ ಬೆನ್ನೂರು, ನಾಗೇಂದ್ರ, ವಿನಯ ಹುಣಸಿಕಟ್ಟಿ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.  

ಭಾರತಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಸ್ವಾಗತಿಸಿದರು. ಲೀಲಾವತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾ ಕೋರಿ ನಿರೂಪಿಸಿದರು. ಹೇಮಕ್ಕಾ ಮುಕ್ತಾಯದ ವಂದನೆ ಸಲ್ಲಿಸಿದರು.