ನಾಗರಬೆಟ್ಟ ಏತ ನೀರಾವರಿ ಪೂರ್ಣಗೊಳಿಸಲು ಅ.5ರ ಗಡುವು
October 5 deadline to complete Nagarabetta lift irrigation project
ಮುದ್ದೇಬಿಹಾಳ 20 : ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲ್ಲೂಕಿನ 15ಕ್ಕೂ ಹೆಚ್ಚು ಗ್ರಾಮಗಳ 3,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಅಕ್ಟೋಬರ್ 5ರಂದು ನಾಗರಬೆಟ್ಟ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಪಂಜುರ್ಲಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಆರಂಭಗೊಂಡ ಯೋಜನೆ ಎಂಟು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಲವು ರೈತರಿಗೆ ಇನ್ನೂ ಪರಿಹಾರ ಹಾಗೂ ಅವಾರ್ಡ್ ನೀಡಿಲ್ಲ. ಹೆಚ್ಚುವರಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವ ರೈತರಿಗೆ ಜನರಲ್ ಅವಾರ್ಡ್ ಘೋಷಿಸುವಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಲಮಟ್ಟಿಯಲ್ಲಿ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಮೂರು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆಗೆ ಭೂಮಿ ಕಳೆದುಕೊಂಡ 156 ರೈತರ ಪೈಕಿ 96 ರೈತರು ಸಹಿ ಮಾಡಿದ್ದು, ಉಳಿದ ರೈತರಿಗೆ ಜನರಲ್ ಅವಾರ್ಡ್ ಘೋಷಿಸಬೇಕು ಎಂದು ಒತ್ತಾಯಿಸಿದರು. ಕಾಲುವೆಯಲ್ಲಿ ನೀರು ಹರಿಯದ ಕಾರಣ ಬಿರುಕುಗಳು ಕಾಣಿಸಿಕೊಂಡಿದ್ದು, ಗಿಡ-ಗಂಟಿಗಳು ಹಾಗೂ ಮಣ್ಣು ತುಂಬಿಕೊಂಡು ಕಾಲುವೆ ಹಾಳಾಗುತ್ತಿದೆ. ಅಕ್ಟೋಬರ್ 5ರೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಾಗರಬೆಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ನಾಲತವಾಡ ಮುಖ್ಯರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು. ಶಾಸಕ ಸಿ.ಎಸ್. ನಾಡಗೌಡ ಅವರು ಭೂಮಿ ಕಳೆದುಕೊಂಡ ರೈತರ ಹಾಗೂ ಭೂಸ್ವಾಧೀನ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ನಡಹಳ್ಳಿ ಟೀಕಿಸಿದರು.
ರೈತರು ನೀರಿಗಾಗಿ ನಡೆಸುವ ಹೋರಾಟವನ್ನು ರಾಜಕೀಯ ಹೋರಾಟ ಎಂದು ಬಿಂಬಿಸಬಾರದು ಎಂದರು. ಮುದ್ದೇಬಿಹಾಳವನ್ನು ಬರಪೀಡಿತ ತಾಲೂಕು ಎಂದು ಘೋಷಿಸುವ ವಿಚಾರದಲ್ಲಿಯೂ ಶಾಸಕ ನಾಡಗೌಡರ ವಿರುದ್ಧ ನಡಹಳ್ಳಿ ಆರೋಪ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರನ್ನು ಅನಗತ್ಯವಾಗಿ ಟೀಕಿಸುವುದು ಸರಿಯಲ್ಲ ಎಂದ ಅವರು, ಸಚಿವರು ಕರೆದಿದ್ದ ಬರಗಾಲ ಸಭೆಗೆ ಶಾಸಕ ನಾಡಗೌಡರು ಏಕೆ ಹಾಜರಾಗಲಿಲ್ಲ ಎಂದು ಪ್ರಶ್ನಿಸಿದರು. ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ಕಾಲುವೆ ಕಾಮಗಾರಿಗಳು ನಡೆದಿದ್ದು, ಇದರಿಂದ ರೈತರಿಗೆ ನೀರು ದೊರೆಯುತ್ತಿದೆ. ಆದರೆ ಕೆರೆ ತುಂಬುವ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತಿದೆ ಎಂದು ನಡಹಳ್ಳಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಯಮನಪ್ಪ ರಕ್ಕಸಗಿ, ರವಿಕುಮಾರ ಸಿದರೆಡ್ಡಿ, ಪರಮಪ್ಪ ಗುರಿಕಾರ, ಶರಣಗೌಡ ಸಿದರೆಡ್ಡಿ, ಕರೆಪ್ಪ ಕೆಸಾಪೂರ, ಶ್ರೀಶೈಲ ಚಲವಾದಿ, ಲಕ್ಕಪ್ಪ ಬಂಗಾರಗುಂಡ, ಆನಂದ ಪಾಟೀಲ, ಪ್ರಭು ಚಲವಾದಿ, ಮಲ್ಲಪ್ಪ ರಕ್ಕಸಗಿ, ಶಂಕರಗೌಡ ಸಿರರಟ್ಟಿ, ಮಹೇಂದ್ರ ಬಂಗಾರಗುಂಡ, ಸಿದ್ದಪ್ಪ ಸೋಮನಾಳ, ಬಸನಗೌಡ ಸಿ. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 