ಪಾಮ್ ಆಯಿಲ್ ಲಾರಿ ಪಲ್ಟಿ : ಎಣ್ಣೆಗಾಗಿ ಕೊಡ, ಬಕೀಟ್, ಕ್ಯಾನ್, ಡ್ರಮ್‌ಗಳೊಂದಿಗೆ ಮುಗಿಬಿದ್ದ ಜನ, ಚದುರಿಸಲು ಪೊಲೀಸರ ಹರಸಾಹಸ

ಪಾಮ್ ಆಯಿಲ್ ಲಾರಿ ಪಲ್ಟಿ : ಎಣ್ಣೆಗಾಗಿ ಕೊಡ, ಬಕೀಟ್, ಕ್ಯಾನ್, ಡ್ರಮ್‌ಗಳೊಂದಿಗೆ ಮುಗಿಬಿದ್ದ ಜನ, ಚದುರಿಸಲು ಪೊಲೀಸರ ಹರಸಾಹಸ Palm oil lorry overturns: Police struggle to disperse crowd of people with pots, buckets, cans, and

               ಕಂಪ್ಲಿ 16:  ಪಾಮ್ ಆಯಿಲ್ ತುಂಬಿದ ಲಾರಿ ಪಲ್ಟಿಯಾದ ಹಿನ್ನಲೆ ಅಕ್ಕಪಕ್ಕದ ಗ್ರಾಮಗಳ ಸಾಕಷ್ಟು ಜನರು ಕೊಡ, ಬಿಂದಿಗೆ, ಬಕೀಟು ಸೇರಿದಂತೆ ನಾನಾ ಸಾಮಾಗ್ರಿಗಳನ್ನು ತಂದು ಆಯಿಲ್ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂತು. ಹೌದು. ತಾಲೂಕಿನ ದೇವಲಾಪುರ ಗ್ರಾಮದ ಮಾರೆಮ್ಮ ದೇವಸ್ಥಾನದ ಬಳಿ ಎಣ್ಣೆ ತುಂಬಿದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಶುಕ್ರವಾರ ಉರುಳಿ ಬಿದ್ದ ಘಟನೆ ನಡೆಯಿತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರು ಎಣ್ಣೆಗಾಗಿ ಮುಗಿಬಿದ್ದಿದ್ದರು. ಲಾರಿ ಉರುಳಿದ ರಭಸಕ್ಕೆ ಟ್ಯಾಂಕರ್ ಬಿರುಕು ಬಿಟ್ಟಿದ್ದು, ಎಣ್ಣೆ ಸೋರಲಾರಂಭಿಸಿದೆ.

              ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಎಣ್ಣೆ ಹಿಡಿದಿಟ್ಟುಕೊಳ್ಳಲು ನಾಮುಂದು ತಾಮುಂದು ಎಂಬಂತೆ ಜನದಟ್ಟಣೆಯಿಂದ ಕೂಡಿತ್ತು. ಎಣ್ಣೆ ತುಂಬಿದ ಲಾರಿಯು ಚಳ್ಳಕೇರಿಯಿಂದ ಗಂಗಾವತಿಗೆ ತೆರಳುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಟ್ಯಾಂಕರ್‌ನಿಂದ ಎಣ್ಣೆ ಸೋರುತ್ತಿರುವುದನ್ನು ಕಂಡ ಸುತ್ತಮುತ್ತಲಿನ ಗ್ರಾಮಸ್ಥರು ಕೊಡಗಳು, ಪ್ಲಾಸ್ಟಿಕ್ ಕ್ಯಾನ್‌ಗಳು, ಬಕೆಟ್‌ಗಳು ಹಾಗೂ ಸಣ್ಣ ಡ್ರಮ್‌ಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ಮಹಿಳೆಯರು, ಪುರುಷರು ಮತ್ತು ಮಕ್ಕಳು ಎನ್ನದೆ ಪ್ರತಿಯೊಬ್ಬರೂ ಸೋರುತ್ತಿದ್ದ ಎಣ್ಣೆಯನ್ನು ತುಂಬಿಕೊಳ್ಳಲು ಪೈಪೋಟಿಗೆ ಬಿದ್ದ ದೃಶ್ಯ ಕಂಡುಬಂತು.

              ಪೊಲೀಸರ ಹರಸಾಹಸ: ಘಟನಾ ಸ್ಥಳಕ್ಕೆ ಧಾವಿಸಿದ ಕುಡುತಿನಿ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಅಪಘಾತದ ಸ್ಥಳದಲ್ಲಿ ಜನದಟ್ಟಣೆಯಾದ ಕಾರಣ ಸಂಚಾರ ವ್ಯತ್ಯಯ ಉಂಟಾಗಿತ್ತು. ಮತ್ತು ಎಣ್ಣೆಯು ರಸ್ತೆಯಲ್ಲಿ ಸೋರಿದ ಹಿನ್ನಲೆ ವಾಹನಗಳು ಸ್ಕಿಡ್ ಆಗುವ ಪರಿಣಾಮ ಸವಾರರು ನಿಧಾನಗತಿಯಲ್ಲಿ ಸಾಗಿದರು. ಎಣ್ಣೆ ಹಿಡಿಯಲು ಮುಗಿಬಿದ್ದಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.