ವಾಷಿಂಗ್ಟನ್, ಅ 4: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದುಪಡಿಸಿದ ಬಳಿಕ, ಪ್ರತೀಕಾರಕ್ಕಾಗಿ ಪಾಕ್ ಭಯೋತ್ಪಾದಕರು ಭಾರತದ ಮೇಲೆ ದಾಳಿ ನಡೆಸಬಹುದು ಎಂಬ ಶಂಕೆಯನ್ನು ಅಮೆರಿಕ ವ್ಯಕ್ತಪಡಿಸಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಭಾರತೀಯ ಸಂವಿಧಾನದ 370ನೇ ವಿಧಿ ರದ್ದುಗೊಂಡ ಬಳಿಕ ಭಾರತದ ಮೇಲೆ ದಾಳಿ ನಡೆಸಬಹುದಾದ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನ ನಿಯಂತ್ರಿಸಬೇಕು ಎಂದು ಹಲವು ದೇಶಗಳು ಒತ್ತಾಯಿಸಿವೆ. ಈ ರೀತಿಯ ಸಂಘರ್ಷವನ್ನು ಚೀನಾ ಬಯಸುತ್ತದೆ ಅಥವಾ ಅದಕ್ಕೆ ಬೆಂಬಲ ನೀಡುತ್ತಿದೆ ಎಂಬ ವಾದ ಸರಿಯಲ್ಲ ಎಂದು ಭಾರತ-ಪೆಸಿಫಿಕ್ ರಕ್ಷಣಾ ಸಹಾಯಕ ಕಾರ್ಯದರ್ಶಿ ರಾಂಡಾಲ್ ಶ್ರಿವರ್ ಹೇಳಿದ್ದಾರೆ. 370ನೇ ವಿಧಿಯನ್ನು ಭಾರತ ರದ್ದುಪಡಿಸಿದ ಬಳಿಕ, ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಚೀನಾ ನೀಡುತ್ತಿರುವ ಬೆಂಬಲ ಹೆಚ್ಚೆಂದರೆ ರಾಜತಾಂತ್ರಿಕ ಮತ್ತು ರಾಜಕೀಯ ಬೆಂಬಲವಾಗಿರಬಹದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.