ಇಸ್ಲಾಮಾಬಾದ್, ಡಿ ೧೭ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ
ತೀವ್ರ ಹಿನ್ನಡೆ ಉಂಟಾಗಿದೆ. ಮುಷರಫ್
ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು
ಪಾಕಿಸ್ತಾನದ ಪೇಷಾವರ ನ್ಯಾಯಾಲಯ ತೀರ್ಪು ನೀಡಿದೆ. ರಾಷ್ಟ್ರ ದ್ರೋಹದ ಚಟುವಟಿಕೆ
ನಡೆಸಿದ್ದಾರೆ ಎಂದು ದೂರಿ ಈ ಹಿಂದೆ
ಅವರ ವಿರುದ್ಧ ದೇಶದ್ರೋಹದ
ಆರೋಪ ಹೊರಿಸಲಾಗಿತ್ತು. ಮುಷರಫ್ ವಿರುದ್ದ
ದಾಖಲಾಗಿರುವ ಪ್ರಕರಣಗಳನ್ನು ಸುದೀರ್ಘ ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳ
ನ್ಯಾಯ ಪೀಠ, ಮುಷರಫ್ ಅವರನ್ನು ದೋಷಿ ಎಂದು ತೀರ್ಪು ಪ್ರಕಟಿಸಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಅಧ್ಯಕ್ಷರೊಬ್ಬರಿಗೆ ಮರಣದಂಡನೆ
ಶಿಕ್ಷೆ ವಿಧಿಸಲಾಗಿದೆ. ಮುಷರಫ್ ಅವರು ೧೯೯೯
ರಿಂದ ೨೦೦೮ ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ನವೆಂಬರ್ ೩, ೨೦೦೭ ರಂದು, ಸಂವಿಧಾನದ ವಿರುದ್ದವಾಗಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿಯನ್ನು ಮುಷರಫ್ ವಿಧಿಸಿದ್ದರು. ಈ ಸಮಯದಲ್ಲಿ ಪ್ರತಿಪಕ್ಷ ನಾಯಕರು ಮತ್ತು ಸುಪ್ರೀಂ ಕೋರ್ಟ್
ನ್ಯಾಯಮೂರ್ತಿಗಳನ್ನು ಅಕ್ರಮವಾಗಿ ನಿರ್ಬಂಧಿಸಿದ್ದರು. ಉನ್ನತ ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳನ್ನು ಅಧಿಕಾರದಿಂದ
ವಜಾ ಗೊಳಿಸಿ, ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದರು.ಇದರಿಂದಾಗಿ ೨೦೧೩ ರಲ್ಲಿ
ಮುಷರಫ್ ಅವರ ಮೇಲೆ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿತ್ತು. ಪ್ರಕರಣದ ತನಿಖೆ
ನಡೆಯುತ್ತಿರುವಾಗ ಅವರು ದೇಶ ತೊರೆದಿದ್ದರು. ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಾಕಷ್ಟು ಬಾರಿ ಆದೇಶಿಸಿದರೂ, ಪಾಲಿಸಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಮುಷರಫ್
ದುಬೈನಲ್ಲಿ ತಲೆ ಮರೆಸಿಕೊಂಡಿದ್ದರು. ಆದರೆ, ಪ್ರಸ್ತುತ
ವಿದೇಶದಲ್ಲಿರುವ ಮುಷರಫ್ ಅವರನ್ನು ಪಾಕಿಸ್ತಾನಕ್ಕೆ ಕರೆತಂದು ಗಲ್ಲಿಗೇರಿಸುವುದು ಇಮ್ರಾನ್ ಖಾನ್
ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಮತ್ತೊಂದೆಡೆ, ಮುಷರಫ್ ಪರವಾಗಿ ವಕೀಲರು ಲಾಹೋರ್ ನ್ಯಾಯಾಲಯದ
ತೀರ್ಪಿನ ಮೇಲೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆಯಿದೆ.