ಟೆಹ್ರಾನ್, ಜ 12: ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ , ಇರಾನ್ ನಲ್ಲಿನ ಉದ್ವಿಗ್ನತೆ ನಿವಾರಣೆಗಾಗಿ ಭಾನುವಾರ ಇರಾನ್ಗೆ ಭೇಟಿ ನೀಡಲಿದ್ದಾರೆ.
ಪಾಕಿಸ್ತಾನ ಸದಾ ಶಾಂತಿಗೆ ಪೂರಕ ನಡೆ ಅನುಸರಿಸಲಿದೆ ಎಂದು ಆಗಾಗ್ಗೆ ಒತ್ತಿ ಹೇಳಿದ್ದ ಪ್ರಧಾನಿ ಇಮ್ರಾನ್ ಖಾನ್ ನಿರ್ದೇಶನದ ಮೇರೆಗೆ ಖುರೇಷಿ ಈ ಭೇಟಿ ನೀಡುತ್ತಿದ್ದಾರೆ.
ಟೆಹ್ರಾನ್ನಲ್ಲಿ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜರೀಫ್ ಅವರನ್ನು ಭೇಟಿ ಮಾಡಿ ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಖುರೇಷಿ ಮಾಹಿತಿ ಪಡೆಯಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಖುರೇಷಿ ಜನವರಿ 13 ರಂದು ರಿಯಾದ್ಗೆ ಭೇಟಿ ನೀಡಿ ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ; ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ವಿಷಯಗಳ ಬಗ್ಗೆ ಸಮಾಲೋಚಿಸಲಿದ್ದಾರೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
"ಇತ್ತೀಚಿನ ಬೆಳವಣಿಗೆಗಳು ಶಾಂತಿ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದ್ದು ಶಾಂತಿಯುತ ನಿರ್ಣಯಕ್ಕಾಗಿ ತಕ್ಷಣವೇ ಒಗ್ಗೂಡಿದ ಪ್ರಯತ್ನಗಳ ಅಗತ್ಯವಿದೆ ಎಂದು ಪಾಕ್ ಒತ್ತಿ ಹೇಳಿದೆ.
ಈ ಭೇಟಿಗಳ ಸಮಯದಲ್ಲಿ, ವಿದೇಶಾಂಗ ಸಚಿವರು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪಾಕಿಸ್ತಾನದ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದು ಯಾವುದೇ ಸಂಘರ್ಷವನ್ನು ತಪ್ಪಿಸಲು ರಾಜತಾಂತ್ರಿಕ ಮಾರ್ಗವನ್ನು ಕಂಡುಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಲಿದ್ದಾರೆ.
ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಪರಿಹರಿಸಲು ಅನುಕೂಲವಾಗುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುವ ಪಾಕಿಸ್ತಾನದ ನಿರ್ಧಾರವನ್ನು ವಿದೇಶಾಂಗ ಸಚಿವರು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.