ಕುಪ್ವಾರಾದ ತಂಗ್‌ಧರ್‍ ನಲ್ಲಿ ಪಾಕ್ ಪಡೆಗಳಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಮೊರ್ಟರ್ ಗಳಿಂದ ಸಿಡಿತ

ಶ್ರೀನಗರ, ಜೂನ್ 30 ; ಕುಪ್ವಾರಾದ ಗಡಿ ಜಿಲ್ಲೆಯಾದ ತಂಗ್‌ಧರ್‍ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ  ಸೇನಾ ಮುನ್ನೆಲೆ ಶಿಬಿರಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಸಂಜೆ ತಡರಾತ್ರಿ ಪಾಕಿಸ್ತಾನದ ಪಡೆಗಳು ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿ, ಶಸ್ತ್ರಾಸ್ತ್ರಗಳೊಂದಿಗೆ ಮೊರ್ಟರ್‍ ಗಳನ್ನು ಹಾರಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ನಿನ್ನೆ ಸಂಜೆ ತಂಗ್‍ಧರ್‍ ಸೆಕ್ಟರ್‌ನಲ್ಲಿ ಗಡಿನಿಯಂತ್ರಣಾ ರೇಖೆಯುದ್ದಕ್ಕೂ ಪಾಕ್ ಪಡೆಗಳು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಆರಂಭಿಸಿವೆ ಎಂದು ಕರ್ನಲ್ ರಾಜೇಶ್‍ ಕಲಿಯಾ ತಿಳಿಸಿದ್ದಾರೆ.ಮೋರ್ಟರ್‍ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಹಾರಿಸುವುದರೊಂದಿಗೆ ಪಾಕ್ ಪಡೆಗಳು ಸೇನಾ ಮುನ್ನೆಲೆ ಶಿಬಿರಗಳಲ್ಲದೆ ಈ ವಲಯದ ನಾಗರಿಕ ಪ್ರದೇಶಗಳನ್ನೂ ಗುರಿಯಾಗಿಸಿಕೊಂಡಿವೆ.

ಆದರೆ, ಪಾಕ್ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಪಾಕ್ ಸೇನೆಯ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಕರ್ನಲ್ ಕಲಿಯಾ ಹೇಳಿದ್ದಾರೆ.ಭಾರೀ ಹಿಮಪಾತದಿಂದಾಗಿ ಒಳನುಸುಳುವಿಕೆ ಮಾರ್ಗಗಳನ್ನು ಮುಚ್ಚುವ ಮೊದಲು ಉಗ್ರರಿಗೆ ಭಾರತದ ಕಡೆ ನುಸುಳಲು ಅನುಕೂಲ ಮಾಡಿಕೊಡುವುದಕ್ಕೆ ಪಾಕಿಸ್ತಾನ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸುತ್ತಿವೆ ಎಂದು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಹಿರಿಯ ಸೇನಾಧಿಕಾರಿಗಳು ಇತ್ತೀಚೆಗೆ ಹೇಳಿದ್ದರು. ಆದರೂ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಒಳನುಸುಳುವಿಕೆ ಕಾಯುತ್ತಿರುವ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಲು ಗಡಿ ನಿಯಂತ್ರಣಾ ರೇಖೆಯ ಕಾವಲು ಪಡೆಗಳು ಈಗಾಗಲೇ ಹೆಚ್ಚಿನ ಎಚ್ಚರಿಕೆ ವಹಿಸಿವೆ ಎಂದು ಅವರು ಹೇಳಿದ್ದಾರೆ.