ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಪೂರಕ: ಎಫ್‌. ವಿ. ಚಿಕ್ಕಮಠ

  ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಪೂರಕ: ಎಫ್‌. ವಿ. ಚಿಕ್ಕಮಠ  Painting fosters creativity and personality development: F. V. Chikkamath

ಲೋಕದರ್ಶನ ವರದಿ 

ಧಾರವಾಡ 21: ಸೃಜನಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಪೂರಕವಾಗಿದ್ದು, ಚಿತ್ರಕಲೆ ಕಲಾವಿದನ  ಕಲ್ಪನೆಯನ್ನು ಜೀವಂತವಾಗಿಸುವ ಪ್ರಭಲ ಮಾಧ್ಯಮ ಎಂದು ಹಿರಿಯ ಚಿತ್ರಕಲಾವಿದ ಎಫ್‌. ವ್ಹಿ. ಚಿಕ್ಕಮಠ ಹೇಳಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ 137ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದಿನಾಂಕ: 20-07-2026 ರಂದು ಆಯೋಜಿಸಿದ್ದ, ಕು. ಪೂಜಾ ಶಿ. ಮರಬಸನ್ನವರ ಅವರ 5 ದಿನಗಳ ಚಿತ್ರಕಲಾ ಪ್ರದರ್ಶನ ಉದ್ಘಾಟಸಿ ಮಾತನಾಡಿದರು. 

ಕು. ಪೂಜಾ ಓರ್ವ ಪ್ರತಿಭಾನ್ವಿತ ಚಿತ್ರಕಲಾವಿದೆ. ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಉಡುಗೆ, ತೊಡುಗೆ ಜೀವನ ವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ಮನೋಜ್ಞ ಚಿತ್ರಗಳನ್ನು ಬಿಡಿಸಿದ್ದಾಳೆ. ಅವಳ ಕಲಾ ನೈಪುಣ್ಯತೆ ಅಮೋಘವಾಗಿದ್ದು ಅವಳಿಗೆ ಉಜ್ವಲ ಭವಿಷ್ಯವಿದೆ. ಅವಳ ನಿಸರ್ಗ ಚಿತ್ರಗಳು ಅಂತರಂಗದ ಭಾವನೆಗಳ ಪ್ರತಿಬಿಂಬದಂತಿವೆ ಎಂದರು. 

ಹಿರಿಯ ಚಿತ್ರಕಲಾವಿದ ಬಿ. ಮಾರುತಿ ಮಾತನಾಡಿ, ಕಲಾವಿದರ ಚಿತ್ರ ಪ್ರದರ್ಶನಕ್ಕೆ ಆರ್ಟ್‌ಗ್ಯಾಲರಿಯ ಕೊರತೆ ಇತ್ತು. ಕ.ವಿ.ವ ಸಂಘವು ಚಿತ್ರಕಲಾ ಪ್ರದರ್ಶನ ಭವನ ನಿರ್ಮಿಸಿ ಆ ಕೊರತೆ ನೀಗಿಸಿ ಕಲಾವಿದರನ್ನು ನಿರಂತರವಾಗಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ. ಪೂಜಾಳ ಎಲ್ಲಾ ಕಲಾಕೃತಿಗಳು ನೈಜತೆಯಿಂದ ಕೂಡಿವೆ ಎಂದು ಹೇಳಿದರು. 

ಡಾ. ಬಸವರಾಜ ಕುರಿಯವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿತ್ರಕಲಾವಿದರಾಗುವವರಿಗೆ ಬದ್ಧತೆ, ಶ್ರದ್ಧೆ ಬಹಳ ಮುಖ್ಯ. ಏಕಾಗ್ರತೆಯಿಂದ ಮಾತ್ರ ಚಿತ್ರಕಲಾವಿದರು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು. 

ಕು. ಪೂಜಾ ಮರಬಸನ್ನವರ ತಮ್ಮ ಚಿತ್ರಕಲೆಯ ಕುರಿತು ಅನಿಸಿಕೆ ಹಂಚಿಕೊಂಡರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು. 

ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ ಹಾಗೂ ಮಾಜಿ ಸಂಸದ ಆಯ್‌. ಜಿ. ಸನದಿ, ಗುರು ತಿಗಡಿ, ಎಮ್‌. ಎಮ್‌. ಚಿಕ್ಕಮಠ ಸೇರಿದಂತೆ ಚಿತ್ರಕಲಾ ವಿದ್ಯಾರ್ಥಿಗಳು, ಕಲಾಪ್ರೇಮಿಗಳು, ಉಪನ್ಯಾಸಕರು ಮುಂತಾದವರಿದ್ದರು.