ಚಿತ್ರಕಲೆ ಬದುಕಿಗೆ ಬಣ್ಣ ತುಂಬುವ ಕಾರ್ಯ ಮಾಡುತ್ತದೆ.

ಚಿತ್ರಕಲೆ ಬದುಕಿಗೆ ಬಣ್ಣ ತುಂಬುವ ಕಾರ್ಯ ಮಾಡುತ್ತದೆ. Painting adds color to life.

ಲೋಕದರ್ಶನ ವರದಿ 

  


ಚಿತ್ರಕಲೆ ಬದುಕಿಗೆ ಬಣ್ಣ ತುಂಬುವ ಕಾರ್ಯ ಮಾಡುತ್ತದೆ. 

ಧಾರವಾಡ 25: ಚಿತ್ರಕಲೆ ಬದುಕಿಗೆ ಬಣ್ಣ ತುಂಬುವ ಕಾರ್ಯ ಮಾಡುತ್ತದೆ. ಅದು ನಮ್ಮ ಜನಪದ ಸಂಸ್ಕೃತಿಯ ಅವಿಭಾಜ್ಯ ಕಲೆಯಾಗಿದೆ ಎಂದು ಹಿರಿಯ ಚಿತ್ರ ಕಲಾವಿದರಾದ ಎಂ.ಆರ್‌. ಬಾಳಿಕಾಯಿ ಅಭಿಪ್ರಾಯಪಟ್ಟರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಚಿತ್ರಕಲಾ ಪ್ರದರ್ಶನ ಸಭಾಭವನದಲ್ಲಿ ಆಯೋಜಿಸಿದ್ದ ಚಿತ್ರಕಲಾವಿದೆ ಸವಿತಾ ಆನಂದ ಬೆಣಗಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಕ್ಯಾನ್ವಾಸಿನೊಳಗೆ ಕೌದಿಯ ಚಿತ್ತಾರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.  

ಚಿತ್ರಕಲೆ ಕೇವಲ ಕಲೆ ಅಲ್ಲಾ. ಅದು ನಮ್ಮ ಅಂತರಂಗದ ಭಾವನೆಗಳನ್ನು ಚಿತ್ರದ ಮೂಲಕ ರೇಖೆಗಳ ಮೂಲಕ ಅಭಿವ್ಯಕ್ತಿಗೊಳಿಸುವ ಮಾಧ್ಯಮವೂ ಕೂಡಾ ಹೌದು. ಸವಿತಾ ಬೆಣಗಿ ಒಬ್ಬ ಆದರ್ಶ ಗೃಹಿಣಿಯಾಗಿ ಕುಟುಂಬದ ಸದಸ್ಯರು ನೀಡಿದ ಸಹಕಾರದಿಂದ ಉದಯೋನ್ಮುಖ ಚಿತ್ರಕಲಾವಿದೆಯಾಗಲು ಸಾಧ್ಯವಾಗಿದೆ. ಜೊತೆಗೆ ಕ.ವಿ.ವ. ಸಂಘ ಚಿತ್ರಕಲಾವಿದರ ಕಲಾ ಪ್ರದರ್ಶನಕ್ಕೆ ಸುಸಜ್ಜಿತ ಆರ್ಟಗ್ಯಾಲರಿ ಸ್ಥಾಪಿಸಿ ಪ್ರೋತ್ಸಾಹ ನೀಡಿದ್ದು ಅಭಿನಂದನೀಯ ಎಂದರು.  

ಮುಖ್ಯಅತಿಥಿಯಾಗಿ ಆಗಮಿಸಿದ್ದ ಡಾ. ಬಸವರಾಜ ಕಲೆಗಾರ ಮಾತನಾಡಿ, ಕೌದಿ ವಿಭಿನ್ನ ಬಣ್ಣದ ತುಂಡುಗಳಿಂದ ಹೊಲಿದ ಕಲಾತ್ಮಕ ವಿನ್ಯಾಸ. ಕೌದಿಯಲ್ಲಿ ನಮ್ಮ ಮನಸ್ಸು ಹಾಗೂ ಭಾವನೆಗಳ ಬೆಸುಗೆ ಇದೆ. ಕೌದಿಯನ್ನು ಮುಖದ ಮೇಲೆ ಹೊದ್ದು ಮಲಗಿದಾಗ ಸಿಗುವ ಆನಂದವೇ ಬೇರೆ. ನಮಗೆ ನಮ್ಮನ್ನಗಲಿದ ತಂದೆ-ತಾಯಿ ನೆನಪು ಕಣ್ಣು ಮುಂದೆ ಬರುವುದು ನಿಶ್ಚಿತ. ಕೌದಿ ನಮ್ಮ ಗ್ರಾಮೀಣ ಜಾನಪದ ಮಹಿಳೆಯರ ಭಾವನಾತ್ಮಕ ಸಂಬಂಧದ ಕಲಾನಿಧಿಯಾಗಿದೆ.  

ಉದ್ಯಮಿಗಳಾದ ಸುಧಾಮೂರ್ತಿ ಅವರು ಭಾರತದ ರಾಷ್ಟಪತಿಗಳಿಗೆ ಉಡುಗರೆಯಾಗಿ ಕೌದಿ ನೀಡಿ ಗೌರವಿಸಿದ್ದು ಉಂಟು. ಪೂಜ್ಯ ಸಿದ್ಧಾರೂಢ ಸ್ವಾಮಿಗಳಿಗೂ ಕೌದಿ ಎಂದರೆ ಪಂಚಪ್ರಾಣವಾಗಿತ್ತು. ಈಗಲೂ ಪ್ರತಿ ಶಿವರಾತ್ರಿಗೆ ಸಿದ್ಧಾರೂಢರಿಗೆ ಕೌದಿ ಪೂಜೆ ಆಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಇಂತಹ ಅಪರೂಪದ ಜಾನಪದ ಕಲೆಯನ್ನು ಜೀವಂತವಾಗಿಸುವ ಕಾರ್ಯ ಸವಿತಾ ಆನಂದ ಬೆಣಗಿ ಮಾಡುತ್ತಿದ್ದಾರೆ ಎಂದು ಹೇಳಿದರು.  

ಹಿರಿಯ ಚಿತ್ರಕಲಾವಿದರಾದ ಬಿ. ಮಾರುತಿ ಮಾನತಾಡಿ, ಕೌದಿ ಎಂದರೆ ಒಂದು ಕಾಲಕ್ಕೆ ಬಡತನದ ಸಂಕೇತ ಎಂದು ಭಾವಿಸಲಾಗಿತ್ತು. ಆದರೆ ಆ ಕೌದಿಯಲ್ಲಿ ಪ್ರೀತಿ-ಮಮತೆಗಳಿವೆ. ಒಂದು ಕಾಲಕ್ಕೆ ಚಿತ್ರಕಲಾವಿದರು ಕಷ್ಟದ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಅವರ ಕಲಾಕೃತಿಗಳು ಕೋಟಿ-ಕೋಟಿ ಬೆಲೆಗೆ ಮಾರಾಟವಾಗುತ್ತಿದ್ದುದು ಅಭಿನಂದನೀಯ. ಸವಿತಾ ಆನಂದ ಬೆಣಗಿ ಅವರು ಕೌದಿ ವಿನ್ಯಾಸದಲ್ಲಿ ಹಾಸ್ಯ ಪ್ರಯೋಗಗಳಿಗೆ ಮುಂದಾಗಲಿ ಎಂದು ಹಾರೈಸಿದರು.  

ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಇಂಥ ಕಲಾವಿದರಿಗೆ ಸಂಘವು ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತಿದೆ. ಜನ ಇಂತಹ ಕಲಾವಿದರಿಗೆ ಪ್ರೋತ್ಸಾಹಿಸಬೇಕಂದರು. ಚಿತ್ರಕಲಾವಿದರಾದ ಸವಿತಾ ಆನಂದ ಬೆಣಗಿ ತಮ್ಮ ಚಿತ್ರಕಲಾ ಬದುಕಿನ ಪಯಣದ ಬಗ್ಗೆ ಅನುಭವ ಹಂಚಿಕೊಂಡರು.  

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಆನಂದ ಬೆಣಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಬಸವರಾಜ ಬಂಡಿವಡ್ಡರ, ವಿಠಲ ಬೆಣಗಿ, ಭಾರತಿ ಬೆಣಗಿ, ಮಂಜುಳಾ ಕೆ. ವ್ಹಿ., ವಿಜಯಲಕ್ಷ್ಮೀ ತಳವಾರ, ರಾಮಚಂದ್ರ ಗರಗ, ರವೀಂದ್ರ ತೇರದಾಳ, ಅಭಿಷೇಕ ಬೆಣಗಿ ಸೇರಿದಂತೆ ಚಿತ್ರಕಲಾವಿದರು, ಬೆಣಗಿ ಪರಿವಾರದವರು ಇದ್ದರು.