ಜಗದ್ಗುರು ರಂಭಾಪುರಿ ಪೀಠಕ್ಕೆ ಕಡೇನಂದಿಹಳ್ಳಿ ಶ್ರೀಗಳ ಪಾದಯಾತ್ರೆ
Padayatra of Kadenandihalli Shri to Jagadguru Rambhapuri Peetha
ಕಡೆನಂದಿಹಳ್ಳಿ 06: ಗುರುಬಲ ಪ್ರಾಪ್ತಿಗಾಗಿ, ಮನೋವಾಂಛಿತ ಫಲ ಸಿದ್ಧಿಗಾಗಿ ನವಂಬರ್ 22ರಂದು ಕಡೇನಂದಿಹಳ್ಳಿಯಿಂದ ಜಗದ್ಗುರು ರಂಭಾಪುರಿ ಪೀಠಕ್ಕೆ (171 ಕಿ.ಮೀ.) ಪಾದಯಾತ್ರೆ ಮಾಡುವ ಸಂಕಲ್ಪವನ್ನು ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಕಟಿಸಿದರು.
ಅವರು ಬುಧವಾರ ಕಡೆನಂದಿಹಳ್ಳಿ ಮಳೆಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ 2026 ಜನೆವರಿ 19-20ರಂದು ನಡೆಯಲಿರುವ ಜಗದ್ಗುರು ರೇಣುಕಾಚಾರ್ಯ ಗುರುಪರಂಪರೆ ಜಾತ್ರೋತ್ಸವ ಮತ್ತು ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ-ಧಾರ್ಮಿಕ ಸಾಂಸ್ಕೃತಿಕ ಸಮಾರಂಭದ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇದೇ ನವಂಬರ್ ತಿಂಗಳ 22 ನೇ ತಾರೀಖಿನಿಂದ ಐದು ದಿನಗಳ ಕಾಲ ಶಿಕಾರಿಪುರ ತಾಲ್ಲೂಕಿನ ತಪೋಕ್ಷೇತ್ರ ಕಡೇನಂದಿಹಳ್ಳಿ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಿಂದ ಜಗದ್ಗುರು ರಂಭಾಪುರಿ ಪೀಠಕ್ಕೆ 171 ಕಿ ಮೀ ಪಾದಯಾತ್ರೆ ಮಾಡುವ ಸಂಕಲ್ಪವನ್ನು ಪ್ರಕಟಿಸಿದರು. ಪಾದ ಯಾತ್ರೆ ನವಂಬರ್ 27ರಂದು ರಂಭಾಪುರಿ ಪೀಠವನ್ನು ತಲುಪಿ ಅಲ್ಲಿ ಜರುಗುವ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಲಿಂ. ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಭಗವತ್ಪಾದರ ಪೀಠಾರೋಹಣ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿದರು. ತಮ್ಮ ಜೊತೆಗೆ ಭಕ್ತಾದಿಗಳು ಪಾಲ್ಗೊಳ್ಳುವರೆಂದು ತಿಳಿಸಿದರು. ಸಮಾರಂಭದ ನೇತೃತ್ವ ವಹಿಸಿದ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಧರ್ಮ ಜಾಗೃತಿಗಾಗಿ ಕಡೇನಂದಿಹಳ್ಳಿ ಶ್ರೀಗಳು ಮಾಡುವ ಎಲ್ಲಾ ಧರ್ಮ ಕಾರ್ಯಗಳಲ್ಲಿ ಜೊತೆಯಾಗಿ ಸಾಗಿದ್ದೇವೆ. ಈ ಹಿಂದೆ ಕೊಲನುಪಾಕ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಾಗ ನಾವು ಸಹ ಪಾದಯಾತ್ರೆ ಮಾಡಿದ್ದೆವು. ಪ್ರಸ್ತುತದಲ್ಲಿ ಬಾಳೆಹೊನ್ನೂರು ಜಗದ್ಗುರು ರಂಭಾಪುರಿ ಪೀಠಕ್ಕೆ ಕೈಗೊಂಡ ಧರ್ಮ ಜಾಗೃತಿ ಪಾದಯಾತ್ರೆಯಲ್ಲಿ ನಾವು ಮತ್ತು ಚನ್ನಗಿರಿ ಹಿರೇಮಠದ ಶ್ರೀಗಳು ಭಾಗವಹಿಸುತ್ತಿದ್ದೇವೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಕೈಗೊಂಡು ಗುರುಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
ಪುಣ್ಯಾಶ್ರಮದಿಂದ ಪ್ರತಿ ವರ್ಷ ಕೊಡಮಾಡುವ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿಗಾಗಿ ಮಠದ ಪರಮಾಪ್ತ ಭಕ್ತರು ಸೇವಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರ ಕುಟುಂಬದ ಹಿನ್ನೆಲೆ ಉಳ್ಳವರಾದ ಶಿಕಾರಿಪುರ ತಾಲೂಕ ಈಸೂರು ಗ್ರಾಮದ ಆರ್.ಎಸ್.ಬಸವಾರಾಧ್ಯ ಸಾಹುಕಾರ ಇವರನ್ನು ಆಯ್ಕೆ ಮಾಡಲಾಯಿತು. ದ್ವಾದಶ ಪಟ್ಟಾಧಿಕಾರದ ಸವಿ ನೆನಪಿಗಾಗಿ ಅಂದಾಜು 4 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 9 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಹರಕೆ ರಥದ ಉದ್ಘಾಟನೆ ಮಾಡುವುದು. ಸಮಾರಂಭದಲ್ಲಿ ವಿಶೇಷವಾಗಿ 16 ವಿಧವಾದ ಸೇವೆಗಳ ಮಾಹಿತಿಯನ್ನು ಭಕ್ತರಿಗೆ ತಿಳಿಸಿ ಸೇವೆ ಪಡೆಯುವುದು. ಈ ಹಿಂದೆ 2021ರ ಡಿಶಂಬರ್ 24ರಿಂದ 2022 ಜನವರಿ 6ನೇ ತಾರೀಖಿನ ವರೆಗೆ 14 ದಿನಗಳಲ್ಲಿ 650 ಕಿ ಮೀ ಕ್ರಮಿಸಿ ಲೋಕಕಲ್ಯಾಣಕ್ಕಾಗಿ ಗುರುಬಲ ಪ್ರಾಪ್ತಿಗಾಗಿ ಕಡೇನಂದಿಹಳ್ಳಿ ಪುಣ್ಯಾಶ್ರಮದಲ್ಲಿ ಶಿಲಾಮಂಟಪ ಮತ್ತು ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮಂಗಲ ಮೂರ್ತಿ ಕಾರ್ಯ ಸಂಕಲ್ಪ ಸಿದ್ಧಿಗಾಗಿ ಹಾರನಹಳ್ಳಿ ಶ್ರೀಗಳು ಹಾಗೂ 40 ಜನ ಶ್ರೀಮಠದ ಭಕ್ತರ ಜೊತೆಗೆ ಕಡೆನಂದಿಹಳ್ಳಿ ಶ್ರೀಗಳು ಪಾದಯಾತ್ರೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಚನ್ನೇಶ ಶಾಸ್ತ್ರಿಗಳು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲಿ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ನ ಸಲಹಾ ಮತ್ತು ಸೇವಾ ಸಮಿತಿ ಪದಾಧಿಕಾರಿಗಳು ಯುವಕ ಮಂಡಳಿ ಸದಸ್ಯರು ಕಡೇನಂದಿಹಳ್ಳಿಯಿಂದ ಶಿಕಾರಿಪುರದವರೆಗೆ ಪಾದಯಾತ್ರೆ ಮಾರ್ಗ ಮಧ್ಯದಲ್ಲಿ ಬರುವ ಗ್ರಾಮದ ಭಕ್ತರು ಭಾಗವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 