ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ವಿರೋಧಿಸಿ ಎಎಪಿ ಪ್ರತಿಭಟನೆ

ಬೆಂಗಳೂರು, ಮಾ.9, ರಾಜ್ಯ ಬಜೆಟ್ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕ್ರಮವಾಗಿ ₹ 1.59 ಹಾಗೂ 1.60 ಕ್ಕೆ ಏರಿಸಿರುವುದನ್ನು ಖಂಡಿಸಿ ಆನಂದ್ ರಾವ್ ವೃತ್ತದ ಬಳಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಖಾಲಿಯಾಗಿರುವ ಬೊಕ್ಕಸವನ್ನು ಭರ್ತಿ ಮಾಡಲು ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಈ ಹಿಂದಿನ ಸಮ್ಮಿಶ್ರ ಸರ್ಕಾರ ತೈಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇವಲ 10 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಆಕಾಶ ಭೂಮಿ ಒಂದಾಗುವಂತೆ ಕೂಗಾಡಿದ್ದ ಇದೇ ಬಿಜೆಪಿ ಸದಸ್ಯರು ಇಂದು ಬಾಯಿಗೆ ಕಡುಬು ತುರುಕಿ ಕೊಂಡಿರುವುದನ್ನು ನೋಡಿದರೆ, 'ತಾನು ಕಳ್ಳ ಪರರನ್ನು ನಂಬ' ಎನ್ನುವ ಸ್ಥಿತಿಯನ್ನು ಬಿಜೆಪಿಯವರು ತಲುಪಿದ್ದಾರೆ ಎನ್ನಬಹುದು ಎಂದು ಕುಟುಕಿದರು.

15 ನೇ ಹಣಕಾಸು ಆಯೋಗದ ಅನುದಾನ ಹಾಗೂ ಕೇಂದ್ರದ ತೆರಿಗೆಯಲ್ಲಿ ರಾಜ್ಯಕ್ಕೆ ಬರುವ ಪಾಲು ಕಡಿತ ಆಗಿದೆ. ಜಿಎಸ್ಟಿ ಪರಿಹಾರವೂ ಸಹ ಕಡಿಮೆ ಆಗಿದ್ದು. ಸಂಪನ್ಮೂಲ ಸಂಗ್ರಹದಲ್ಲಿ ಕೇಂದ್ರದ ಪಾಲು ಸಹ ಸುಮಾರು ₹ 15 ಸಾವಿರ ಕೋಟಿ ಕಡಿಮೆ ಆಗಿದೆ. ಇದರ  ಪರಿಣಾಮ, ಸಾರ್ವಜನಿಕರು ದಿನನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಮೇಲೆ ಸಾಗಾಣೆ ವೆಚ್ಚ ಹೆಚ್ಚಾಗಿ, ಇವುಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಇದೆ  ಎಂದು ಆತಂಕ ವ್ಯಕ್ತಪಡಿಸಿದರು.ಕೇಂದ್ರ ಬಿಜೆಪಿ ಸರ್ಕಾರದ ನೀತಿಯಿಂದಲೂ ಸಹ ತೈಲ ಬೆಲೆ ಏರಿಕೆ ಆಗುತ್ತಲೇ ಇದೆ. ಇದರ ಪರಿಣಾಮ ಸಾರ್ವಜನಿಕರು ದಿನನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಸಾಗಾಣಿಕ ವೆಚ್ಚ ಹೆಚ್ಚಾಗಿ ಬೆಲೆಯೂ ಸಹ ಗಗನಕ್ಕೆ ಏರುವ ಸಾಧ್ಯತೆ ಇದೆ.  ಈಗಾಗಲೇ ಅತಿವೃಷ್ಟಿ, ಅನಾವೃಷ್ಟಿ, ಉದ್ಯೋಗ ಕಡಿತ ಹೀಗೆ ನಾನಾ ಪೆಟ್ಟುಗಳನ್ನು ತಿಂದಿರುವ 'ಜನ ಸಾಮಾನ್ಯ' ನ ಕಾಲು ಮುರಿದು ದುಡಿದು ತಿನ್ನಲು ಆಗದಂತಹ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ದೂರಿದರು.ಕರ್ನಾಟಕದಲ್ಲಿಯೂ ಬಿಜೆಪಿ, ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು 'ಸ್ವರ್ಗ' ಮಾಡಲಾಗುವುದು, 'ಸಿಂಗಾಪುರ' ಮಾಡಲಾಗುವುದು ಎನ್ನುತ್ತಿದ್ದ ಜನ ಪ್ರತಿನಿಧಿಗಳ ಗಾಢ ನಿದ್ದೆಯಿಂದ ಇನ್ನೂ ಎಚ್ಚರಗೊಂಡಂತೆ ಕಾಣುತ್ತಿಲ್ಲ.

ನೀ ಹೊಡೆದಂತೆ ಮಾಡು ನಾನು ಅತ್ತಂತೆ ಮಾಡುತ್ತೇನೆ ಎನ್ನುವ ಒಪ್ಪಂದಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಬಂದಂತೆ ಕಾಣುತ್ತಿದೆ. ಇದುವರೆಗೂ ಸಹ ಈ ಎರಡೂ ಪಕ್ಷಗಳು ದಿವ್ಯ ಮೌನವಹಿಸಿರುವುದು ನೋಡಿದರೆ ಯಾರಿಗೂ ಜನರ ಹಿತಾಸಕ್ತಿ ಇಲ್ಲವೇ ಇಲ್ಲ ಎನ್ನಬಹುದು ಎಂದು ಹೇಳಿದರು.ಭಾರತದಿಂದ ರಫ್ತು ಆಗುವ ನಮ್ಮ ದೇಶದ ಪೆಟ್ರೋಲ್ ನೇಪಾಳದಲ್ಲಿ 65 ರೂ.ಗೆ ಸಿಗುತ್ತದೆ ಎನ್ನುವುದು ಕುಚೋದ್ಯವೇ ಸರಿ.  ಪ್ರಪಂಚದ 4ನೇ ಅತೀದೊಡ್ಡ ಗುಜುರಾತಿನ ತೈಲ ಘಟಕವನ್ನು ಸಂಪೂರ್ಣವಾಗಿ ರಿಲಾಯನ್ಸ್ ಕಂಪೆನಿಗೆ ಸಬ್ಸಿಡಿ ಆಧಾರದಲ್ಲಿ ನಡೆಸಲು ಅನುಮತಿ ನೀಡಿರುವ ಮೋದಿ ಸರ್ಕಾರ. ದೇಶದ ಬಡ ಜನರ ಬೆನ್ನಿನ ಮೇಲೆ ಬಾರ  ಹಾಕಿ, ಹಾಕಿ ಗೂನಾಗುವಂತೆ ಮಾಡಿದ್ದಾರೆ ಎಂದು ದಾಸರಿ ಹೇಳಿದರು.ತೆರಿಗೆ ಹೆಚ್ಚಳದ ಮೂಲಕ ತೈಲ ಕಂಪನಿಗಳ ಒಡೆಯರ ಜೇಬು ತುಂಬಿಸುತ್ತಿರುವ ಈ ಕ್ರಮವನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂಪಡೆಯಬೇಕು.  ಬಡ ಮತ್ತು ಮಧ್ಯಮ ವರ್ಗದ ಜನರ ಬಗ್ಗೆ ನೈಜ ಕಾಳಜಿ ಇದ್ದರೆ ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳು ಈ ಬಜೆಟ್ಗೆ ಅನುಮೋದನೆ ನೀಡಬಾರದು ಎಂದು  ಮೋಹನ್ ದಾಸರಿ ಆಗ್ರಹಿಸಿದರು.ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಪಕ್ಷದ ಸ್ಥಳಿಯ ಮುಖಂಡರಾದ ಸೀತಾರಂ ಗುಂಡಪ್ಪ, ಆಯೂಬ್ ಖಾನ್, ಜಗದೀಶ್ ಚಂದ್ರ, ಲಕ್ಷ್ಮಿಕಾಂತ್ ರಾವ್, ಶರತ್ ಖಾದ್ರಿ, ಚನ್ನಪ್ಪ ಗೌಡ, ರವಿಚಂದ್ರ, ಫೀರೋಜ್ ಖಾನ್ ಭಾಗವಹಿಸಿದ್ದರು.