ಬೀಜಿಂಗ್, ಜ 27 : ಹೊಸ ಕರೋನವೈರಸ್ ನ ಕೇಂದ್ರಬಿಂದುವಾಗಿರುವ ಚೀನಾದ ವುಹಾನ್ ನ 4,000 ಕ್ಕೂ ಹೆಚ್ಚು ನಿವಾಸಿಗಳು ಸದ್ಯ, ಚೀನಾದ ಗಡಿಯನ್ನು ದಾಟಿದ್ದಾರೆ ಎಂದು ಸ್ಥಳೀಯ ಸರ್ಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
"ಜ 24 ಮತ್ತು ಜ 26 ರ ಮಧ್ಯೆ ವಿದೇಶಕ್ಕೆ ಹೋಗಿದ್ದ ಜನರು ವಾಪಸ್ಸಾಗಿದ್ದಾರೆ. ಸದ್ಯ, ವುಹಾನ್ ನ 4,096ಕ್ಕೂ ಹೆಚ್ಚು ನಿವಾಸಿಗಳು ಇನ್ನೂ ವಿದೇಶದಲ್ಲಿದ್ದಾರೆ.’ ಎಂದು ವುಹಾನ್ ಪುರಸಭೆ ತಿಳಿಸಿದೆ. ಈ ಕುರಿತ ಮಾಹಿತಿಯನ್ನು ಪುರಸಭೆ, ಪ್ರವಾಸ ಆಯೋಜಕರು ಮತ್ತು ಇತರ ನಗರಗಳಿಗೆ ಕಳುಹಿಸಿ, ಸಹಾಯಕ್ಕೆ ಮನವಿ ಮಾಡಿದೆ.
ಪ್ರವಾಸ ರೂಪದಲ್ಲಿ ವಿದೇಶಗಳಿಗೆ ತೆರಳಿರುವ ಜನರು ಕೆಲ ದಿನಗಳಲ್ಲೇ ಚೀನಾಗೆ ಮರಳಲು ನಿರ್ಧರಿಸಿದ್ದಾರೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ, ಚೀನಾದಲ್ಲಿ 80 ಜನರು ವೈರಸ್ ನಿಂದ ಸಾವನ್ನಪಿದ್ದು, 2,700 ಕ್ಕೂ ಹೆಚ್ಚು ಕರೋನ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಹೊಸ ಕೊರೊನಾ ವೈರಸ್ ನಿಂದ ಉಂಟಾಗುವ ನ್ಯುಮೋನಿಯಾ ಪ್ರಕರಣಗಳು ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿ ವರದಿಯಾಗಿವೆ.
ಭಾನುವಾರ, ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ನಿರ್ದೇಶಕ ಮಾ ಕ್ಸಿಯಾವೋಯಿ ಸುದ್ದಿಗಾರರೊಂದಿಗೆ ಮಾತನಾಡಿ, ವೈರಸ್ ತಡೆಯ ಪ್ರಯತ್ನಗಳ ಹೊರತಾಗಿಯೂ ವೈರಸ್ ವ್ಯಾಪಕವಾಗಿ ಮತ್ತು ವೇಗವಾಗಿ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.