ಗೋಕಾಕ 27: ಪ್ರತಿ ವರ್ಷ ಮಳೆಗಾಲ ಆರಂಭವಾಯಿತೆಂದರೇ ಸಾಕು ಅರಣ್ಯ ಇಲಾಖೆಯವರು ಎಲ್ಲ ವಲಯಗಳಲ್ಲಿ ಸಸಿ ನೆಡುವ ಕಾರ್ಯ ಭರದಿಂದ ಸಾಗುತ್ತದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಾಮಾಜಿಕ ಅರಣ್ಯ ವಲಯದ ಅಧಿಕಾರಿ ಸುಮಾರು 26 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಹಚ್ಚಿದ್ದು ಮಳೆಯ ಪ್ರಮಾಣ ಕಡಿಮೆ ಇರುವ ಕಾರಣ ತಮ್ಮ ಇಲಾಖೆಯಿಂದ ಸಸಿಗಳಿಗೆ ನೀರೆರೆಯುತ್ತಿದ್ದಾರೆ.
ಕಳೆದ ಸಲ ಸಸಿ ಹಚ್ಚಿದ ನಂತರ ಸುಮಾರು ಗಿಡಗಳು ಮಳೆ ಹಾಗೂ ನೀರಿಲ್ಲದೇ ಹಾಳಾಗಿ ಹೋಗಿದ್ದು, ಆದ್ದರಿಂದ ಕಳೆದ ಮೂರ್ನಾಲ್ಕು ವರ್ಷದಿಂದ ಹುಕ್ಕೇರಿಯಲ್ಲಿ ಸಂಪೂರ್ಣ ಮಳೆಯಾಗಿಲ್ಲ, ಹೀಗಾಗಿ ಪ್ರಸಕ್ತ ವರ್ಷವೂ ಕೂಡಾ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಲಯದ ಸಾಮಾಜಿಕ ಅರಣ್ಯ ಇಲಾಖೆಯವರು ತಮ್ಮ ವಲಯ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಸಸಿ ನೆಡುವದರೊಂದಿಗೆ ಅವುಗಳ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಹುಕ್ಕೇರಿ ವಲಯದ ಸಾಮಾಜಿಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬಡಕುಂದರಿ, ಬೆಳವಿ, ಕೋಟ, ಬೆಳ್ಳಂಕಿ, ಖವಣೆವಾಡಿ, ಹಿಡಕಲ್ ರಸ್ತೆ, ರಕ್ಷೀ, ಯಾದಗೂಡ, ನೇಲರ್ಿ, ಗುಡಸ್ ಸೇರಿದಂತೆ ವಿವಿಧ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಗಳಲ್ಲಿ ಸಸಿ ನೆಡಲಾಗಿದೆ.
ವಿವಿಧ ಜಾತಿಯ ಸಸಿಗಳು: ಹುಕ್ಕೇರಿ ವಲಯದ ಸಾಮಾಜಿಕ ಅರಣ್ಯ ಇಲಾಖೆಯಿಂದ ತಪಸಿ, ಬೇವು, ಆಲ, ಅರಳಿ, ನೇರಳೆ, ಬಸರಿ, ಮಾವು, ಹೊಂಗೆ, ಹುಣಸೆ, ಬದಾಮ ಸೇರಿದಂತೆ ಮುಂತಾದ ಜಾತಿಯ ಸಸಿಗಳನ್ನು ನೆಡಲಾಗಿದೆ. ಹಣ್ಣು ಬಿಡುವ ಜಾತಿಯ ಸಸಿಗಳನ್ನು ಹೆಚ್ಚಾಗಿ ಬೆಳೆಸಲಾಗುವದು.
ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಸಸಿ ನೆಡಲು ಸಾಮಾಜಿಕ ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ. ನಮ್ಮ ಇಲಾಖೆಯಿಂದ ಈಗಾಗಲೇ ಟ್ಯಾಂಕರಗಳ ಮೂಲಕ ಸಸಿಗಳಿಗೆ ನೀರು ಹಾಕುವ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಸಸಿಗಳನ್ನು ಬೆಳೆಸಿ ಪ್ರಕೃತಿ ಕಾಪಾಡಲು ಸಾರ್ವಜನಿಕರು ಮುಂದೆ ಬರಬೇಕಿದೆ. ರಸ್ತೆಯ ಬದಿಯಲ್ಲಿರುವ ಸಸಿಗಳ ಬೆಳವಣಿಗೆಗೆ ರೈತರು ನೀರು ಹಾಸುವ ಮೂಲಕ ನಿಸರ್ಗದ ಉಳಿವಿಗೆ ಶ್ರಮಿಸಬೇಕಿದೆ.
ಆರ್ ವಿ ಕಾಂಬಳೆ
ಹುಕ್ಕೇರಿ ಸಮಾಜಿಕ ವಲಯ ಅರಣ್ಯಾಧಿಕಾರಿ.