ದೇಶದಲ್ಲಿ 24 ತಾಸಿನಲ್ಲಿ ಕೊವಿಡ್‍ನ 11,929 ಹೊಸ ಪ್ರಕರಣಗಳು ದೃಢ: ಸಾವಿನ ಸಂಖ್ಯೆ 9,195 ಕ್ಕೆ ಏರಿಕೆ

ನವದೆಹಲಿ, ಜೂನ್ 14 (ಯುಎನ್‌ಐ) ದೇಶದಲ್ಲಿ ಭಾನುವಾರ ಒಂದೇ ದಿನದಲ್ಲಿ ಅತಿ ಹೆಚ್ಚು ಕೊವಿಡ್ -19 ಸೋಂಕಿನ 11,929 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,20,922 ಕ್ಕೆ ಏರಿದೆ. ಕಳೆದ 24 ತಾಸಿನಲ್ಲಿ 311 ಸಾವುಗಳು ಸಂಭವಿಸುವುದರೊಂದಿಗೆ ಸಾವಿನ ಸಂಖ್ಯೆ 9,195 ಕ್ಕೆ ಏರಿದೆ.ಚೇತರಿಕೆ ವಿಷಯದಲ್ಲಿ ಭಾರತದಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತಿದೆ.   ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ, ಸಕ್ರಿಯ ಸಂಖ್ಯೆಯ ಪ್ರಕರಣಗಳನ್ನು ಮೀರಿದೆ.ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿಯಂತೆ, ಗುಣಪಡಿಸಿದ ಮತ್ತು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ ಪ್ರಕರಣಗಳ ಸಂಖ್ಯೆ ಸದ್ಯ, 1,62,378ರಷ್ಟಿವೆ.

ಈ ಸಂಖ್ಯೆ ದೇಶದಲ್ಲಿನ ಸಕ್ರಿಯ ಪ್ರಕರಣಗಳಿಗಿಂತ 13,030ರಷ್ಟು ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,49,348ರಷ್ಟಿದೆ. ಶನಿವಾರದಿಂದ ಒಟ್ಟು 8,084 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಕೊವಿಡ್‍ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಮುಖ್ಯಮಂತ್ರಿ ಹಾಗೂ ಅಧಿಕಾರಿಗಳೊಂದಿಗೆ ಭಾನುವಾರ ಚರ್ಚೆ ನಡೆಸಲಿದ್ದಾರೆ.