ಹಂಪಿ 15: ನಾಟಕ ಸಮಾಜವನ್ನು ತಿದ್ದುವ, ಎಚ್ಚರಿಸುವ ಎಲ್ಲಾ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಅದ್ಭುತ ಶಕ್ತಿಯಾಗಿದೆ. ನಾಟಕ ಮತ್ತು ಸಂಗೀತಕ್ಕೆ ಮೂಲ ನೆಲೆಗಟ್ಟು ಶ್ರದ್ದೆ ಎಂದು ರಂಗಭೂಮಿ ಹಾಗೂ ಚಲನಚಿತ್ರ ನಟರು, ನಿರ್ದೇಶಕರು, ನಿರ್ಮಾಪಕರು ಆದ ಶ್ರೀ ಚಿಂದೋಡಿ ಬಂಗಾರೇಶ್ ನುಡಿದರು.
ದಿನಾಂಕ 15.2.2025ರಂದು ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ ನಾಟಕ ವಿಭಾಗ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಸಹಯೋಗದಲ್ಲಿ ಹದಿನೈದು ದಿನಗಳವರೆಗೆ ನಡೆದ ನಾಟಕ ರಚನೆ ನಟನೆ ಹಾಗೂ ನಿರ್ದೇಶನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಂದುವರಿದು ಮಾತನಾಡುತ್ತ ಶಿಬಿರಾರ್ಥಿಗಳು ಪಾತ್ರಪರಕಾಯ ಪ್ರವೇಶ ಮಾಡಬೇಕು. ಗ್ರಹಿಸುವ ಶಕ್ತಿ ಬೇಕು. ಸಂಗೀತದಿಂದಲೇ ನಾಟಕ, ಸಂಗೀತವಿಲ್ಲದೆ ನಾಟಕವಿಲ್ಲ. ನಮ್ಮನ್ನು ಸ್ವರ ಚೇತನಗೊಳಿಸಿದರೆ ಅಕ್ಷರ ಜಾಗೃತಗೊಳಿಸುತ್ತದೆ. ನಾಟಕದಲ್ಲಿ ಸಂಭಾಷಣೆಗೆ ಶುದ್ಧ ಕನ್ನಡ ಬೇಕು. ನಾಟಕ, ಸಂಗೀತ, ಸಾಹಿತ್ಯವನ್ನು ಅರಿತು ನಟಿಸುವವನೇ ನಿಜವಾದ ನಟನಾಗುತ್ತಾನೆ. ಸಾಹಿತ್ಯದ ಸೊಗಡು ಬಿಡಬೇಡಿ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಶಿಬಿರಾರ್ಥಿಗಳಾದ ಮಂಜುನಾಥ ಕರಲಿಂಗಣ್ಣ, ಹೆಚ್.ಮಲ್ಲಿಕಾರ್ಜುನ, ಮುಮ್ತಾಜ್ ರಾಟಿ, ಹರೀಶ್ ಭಂಡಾರಿ, ಬೋರಯ್ಯ ಡಿ.ಕೆ ಇವರು ತಮ್ಮ ಅನಿಸಿಕೆ ಮತ್ತು ಅನುಭವಗಳನ್ನು ವ್ಯಕ್ತಪಡಿಸುತ್ತ ನಾಟಕ ತರಬೇತಿ ಶಿಬಿರದಲ್ಲಿ ನಾವೆಲ್ಲರೂ ಜೀವಂತಿಕೆಯಿಂದ ಬದುಕಿ ಪಾತ್ರ ನಿರ್ವಹಿಸಿದೆವು. ನಾಟಕ ನಮ್ಮ ಅಹಂಕಾರ ಅಳಿಸಿ ಮನಸ್ಸಿನ ಅಲಂಕಾರವನ್ನು ಹೆಚ್ಚಿಸಿದೆ. 10 ದಿನಗಳಲ್ಲಿ ನಾಟಕ ಕಲಿತು ಪ್ರದರ್ಶನ ನೀಡುತ್ತೇವೆಯೇ ಎಂಬ ಅನುಮಾನವಿತ್ತು. ಆದರೆ ಇಂದು ನಾಟಕ ಪ್ರದರ್ಶನ ನೀಡುತ್ತಿದ್ದೇವೆ. ನಾಟಕದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ನಾವು ಎಚ್ಚರವಾಗಿರಬೇಕು, ದೃಢವಾಗಿರಬೇಕು. ಚಂದ್ರಶೇಖರ ಕಂಬಾರರ ಅನೇಕ ಕನಸುಗಳಲ್ಲಿ ನಾಟಕ ಶಿಬಿರವೂ ಒಂದು ಎಂದು ಹೆಮ್ಮೆಯಿಂದ ಹೇಳಿದರು.
ಧಾರವಾಡದ ರಂಗಕರ್ಮಿ ರಂಗರೂಪ ಮತ್ತು ನಿರ್ದೇಶನ ನೀಡಿದ ಶ್ರೀಕಾಂತ ನವಿಲುಗರಿ ಅವರು ಮಾತನಾಡುತ್ತ ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ಮುಗ್ದ ಮನಸ್ಸುಗಳಿವೆ. ನಿಮ್ಮೆಲ್ಲರಿಂದ ಶಿಬಿರ ಸಾಧ್ಯವಾಗಿದೆ. ಪಾತ್ರ, ಭಾವ, ಭಾವದ ಏರಿಳಿತ, ಪರಾಕಾಯ ಪ್ರವೇಶ ಇವೆಲ್ಲವನ್ನು ಇನ್ನಷ್ಟು ನೀವು ಕಲಿಯಿರಿ ಎಂದು ಹೇಳುತ್ತ ಇಲ್ಲಿನ ಚರ್ಚೆಗಳು ನನ್ನನ್ನು ಬೆಳೆಸಿವೆ. ಜೀವಗಳ ಕಟ್ಟುವಿಕೆ, ಮನಸ್ಸುಗಳ ಕಟ್ಟುವಿಕೆ ಮಾಡಿದ್ದೇನೆ ಎನ್ನುವ ಸಾರ್ಥಕತೆ ನನ್ನಲ್ಲಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಹೊಸಪೇಟೆಯ ಹಿರಿಯ ರಂಗಕರ್ಮಿ ಶ್ರೀ ಮಾ.ಬ.ಸೋಮಣ್ಣ ಮಾತನಾಡುತ್ತ ಕನ್ನಡ ವಿಶ್ವವಿದ್ಯಾಲಯದ ಧೂಳಿನಲ್ಲಿ ಸ್ನಾನಮಾಡಿದವರಿಗೆ ಬೌದ್ಧಿಕ, ಜ್ಞಾನದ ಬಡತನ ಹೋಗುತ್ತದೆ ಎಂದು ತಿಳಿಸಿದಾಗ ಶಿಬಿರಾರ್ಥಿಗಳು ರೋಮಾಂಚನಗೊಂಡರು.
ಎರಡು ವಿಭಾಗಗಳ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರಿ ಪ್ರಾಸ್ತಾವಿಕ ನುಡಿಯುತ್ತ ಒಬ್ಬ ಕನಸುಗಾರ ಏನೆಲ್ಲ ತ್ಯಾಗ ಮಾಡಬೇಕಾಗುತ್ತದೆ ಎಂಬುದಕ್ಕೆ ಶಿಬಿರಾರ್ಥಿಗಳಾದ ನೀವೇ ಸಾಕ್ಷಿ. ಕನ್ನಡ ವಿಶ್ವವಿದ್ಯಾಲಯ ಇನ್ನೂ ಜೀವಸತ್ವ ಕಳೆದುಕೊಂಡಿಲ್ಲ. ಚೈತನ್ಯ ಉಳಿಸಿಕೊಂಡಿದೆ. ಮಾಡುವ ಮನಸ್ಸಿದ್ದರೆ ಆರ್ಥಿಕ ಸಮಸ್ಯೆಯಿದ್ದರೂ ಸಾಹಿತ್ಯ, ಸಾಂಸ್ಕೃತಿಕ ಶ್ರೀಮಂತಿಕೆ ಇರುತ್ತದೆ ಎಂದು ಹೇಳಿ ಎಲ್ಲರನ್ನು ಸ್ವಾಗತಿಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಮಾನ್ಯ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಸಂಗೀತ, ನೃತ್ಯ, ನಾಟಕ ಇದೊಂದು ಭಾವ ಪ್ರಪಂಚ. ಈ ಭಾವ ಪ್ರಪಂಚದಲ್ಲಿ ನಮ್ಮನ್ನು ನಾವೇ ಮರೆಯುವ ಸಂದರ್ಭಗಳಿರುತ್ತವೆ. ವಿಶ್ವವಿದ್ಯಾಲಯವು ತನ್ನ ಇತರೆ ಕೇಂದ್ರಗಳಲ್ಲಿ ನೃತ್ಯ ತರಗತಿಗಳನ್ನು ಆರಂಭಿಸುವ ಯೋಚನೆ ಮಾಡಿದೆ. ಜೊತೆಗೆ ನಾಟಕದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ನಡೆಸುವ ಸಿದ್ಧತೆಯಲ್ಲಿದೆ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಶ್ರೀ ಚಿಂದೋಡಿ ಬಂಗಾರೇಶ್ ಅವರು ಸಮಾರೋಪದ ನಂತರ ಸಂಗೀತ, ಸಾಹಿತ್ಯ, ನಾಟಕ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಅಧ್ಯಾಪಕರು ಡಾ.ವೆಂಕಟಗಿರಿ ದಳವಾಯಿ, ಡಾ.ಚನ್ನವೀರ್ಪ, ಬಾಗಲಕೋಟೆಯ ನಾಟಕ ರಚನೆಕಾರರಾದ ಶ್ರೀಹರಿ ಧೂಪದ, ಮಾಹಿತಿ ಕೇಂದ್ರದ ಡಾ.ಡಿ.ಮೀನಾಕ್ಷಿ, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಸತೀಶ್‌ಗೌಡ ನಿರೂಪಿಸಿದರು, ಸುಮಾ ಕಮ್ಮಾರ ಅವರು ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಅಂಧರ ಬಾಳಿನ ಸುಂದರ ಚಂದಿರ ಗದುಗಿನ ಗವಾಯಿ ಗಿರಿಶಿಖರ ಎಂದು ಪ್ರಾರ್ಥಿಸಿದರು.