ಗ್ರಾಮೀಣ ಮಹಿಳೆಯರಿಗೆ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಆಯೋಜನೆ
ಲೋಕದರ್ಶನ ವರದಿ
ವಿಜಯಪುರ 21: ಮುಂಬರುವ ದಿನಗಳಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ “ಓದುತ್ತಿರುವಾಗಲೇ ಗಳಿಕೆ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಿಗೆ ಬಯೋಡೀಸೆಲ್ ಘಟಕ, ಕಾಗದ ಮರುಬಳಕೆ ಘಟಕ, ಅನನ್ಯ ಆಹಾರ ಸಂಸ್ಕರಣಾ ಕೇಂದ್ರ ಮತ್ತು ಗ್ರೀನ್‌ಹೌಸ್‌ಗಳಲ್ಲಿ ವಿವಿಧ ಕೌಶಲಗಳನ್ನು ಕಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಅವರು ಘೋಷಿಸಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಯ ಪ್ರಗತಿ ವರದಿ ಮಂಡಿಸಿದ ಅವರು, ಕೌಶಲ್ಯ ಮಹಿಳಾ ತಂತ್ರಜ್ಞಾನ ಪಾರ್ಕ್ ಮೂಲಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಮಹಿಳೆಯರಿಗೆ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದರು.
ವಿದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳ ಕಾಲ ಪಾರ್ಟ್ ಟೈಂ ಕೆಲಸ ಮಾಡುವ ಪದ್ಧತಿ ವ್ಯಾಪಕವಾಗಿ ಬಳಕೆಯಲ್ಲಿದೆ. ಅದೇ ಮಾದರಿಯಲ್ಲಿ ಮಹಿಳಾ ವಿವಿಯಲ್ಲಿ ಓದುವ ವಿದ್ಯಾರ್ಥಿನಿಯರು ತಮ್ಮ ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಂ ಕೆಲಸ ಮಾಡುವ ಮೂಲಕ ವಿವಿಧ ಕೌಶಲಗಳನ್ನು ಕಲಿಯುವುದರ ಜತೆಗೆ ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವಾಗಲೇ ಒಂದಷ್ಟು ದುಡ್ಡು ಸಂಪಾದಿಸುವ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿನಿಯರ ಪಾಲಕರ ಆರ್ಥಿಕ ಹೊರೆ ಒಂದಷ್ಟು ಕಡಿಮೆ ಮಾಡಬಹುದಾಗಿದೆ ಎಂದು ವಿವರಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕುಲಪತಿಗಳ ಸಮಾವೇಶದಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ದೂರಶಿಕ್ಷಣ ಪುನರಾಂಭಿಸುವ ಬಗೆಗೆ ವಿಸ್ತೃತ ಚರ್ಚೆಗಳನ್ನು ನಡೆಸಿದ್ದು ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಉನ್ನತ ಶಿಕ್ಷಣದ ಅಭಿವೃದ್ಧಿಯಲ್ಲಿ ಮೂಲಸೌಕರ್ಯದ ಮಹತ್ವವನ್ನು ಅರಿತು, ನಮ್ಮ ವಿಶ್ವವಿದ್ಯಾಲಯವು ಕ್ಯಾಂಪಸ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡಿದೆ. 2025-26 ನೇ ಶೈಕ್ಷಣಿಕ ವರ್ಷದಲ್ಲಿ ದಶಮಾನೋತ್ಸವದ ಮೊದಲ ಮಹಡಿಯಲ್ಲಿ ರೂ. 3.73 ಕೋಟಿ ಅನುದಾನದಲ್ಲಿ ಸ್ನಾತಕ ಕೋರ್ಸುಗಳನ್ನು ನಡೆಸುವ ಸಲುವಾಗಿ ತರಗತಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕೇಂದ್ರ ಸರ್ಕಾರದ ಪಿಮ್ಷ್‌ಉಷಾ ಯೋಜನೆಯಡಿ 9.07 ಕೋಟಿ ಮೊತ್ತದ ಅನುದಾನದಲ್ಲಿ “ಮಹಿಳಾ ಕ್ಷೇಮಾಭಿವೃದ್ಧಿ ಕೇಂದ್ರ” ಹಾಗೂ ಮಹಿಳಾ ಶೌಚಾಲಯಗಳ ನವೀಕರಣ ಕಟ್ಟಡ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ವಿವಿಯ ಜ್ಞಾನಶಕ್ತಿ ಕ್ಯಾಂಪಸ್‌ನಲ್ಲಿ ನಾಲ್ಕು ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿ ನಿಲಯಗಳು ಇವೆ. ಇದಲ್ಲದೆ, ಸ್ನಾತಕ ವಿದ್ಯಾರ್ಥಿನಿಯರಿಗಾಗಿ ಎರಡು ವಸತಿ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯರಿಗೆ 500 ಲೀಟರ್ ಸಾಮರ್ಥ್ಯದ ಆರ್.ಒ. ನೀರು ಶುದ್ಧೀಕರಣ ಯಂತ್ರ, ಗೀಸರ್‌ಗಳು, ಸೌರ ಹೀಟರ್‌ಗಳು, ಸೌರ ದೀಪಗಳು ಮತ್ತು ವಸತಿ ನಿಲಯಗಳ ಸುತ್ತಲೂ ಸೌರ ರಸ್ತೆ ದೀಪಗಳಂತಹ ಸೌಲಭ್ಯಗಳನ್ನು ಒದಗಿಸುತ್ತದೆ. ವಿದ್ಯಾರ್ಥಿನಿಯರ ಭದ್ರತೆಯನ್ನು ಖಚಿತಪಡಿಸಲು 24 ಗಂಟೆಗಳ ಭದ್ರತಾ ವ್ಯವಸ್ಥೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿನಿಯರ ಕಲ್ಯಾಣಕ್ಕಾಗಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ನರ್ಸ್ ನೇಮಕವಾಗಿದ್ದು, ಆರೋಗ್ಯ ಕೇಂದ್ರದಲ್ಲಿ 24ಥ7 ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್ ಸೇವೆಯೂ ಲಭ್ಯವಿದೆ ಎಂದೂ ಕುಲಪತಿಗಳು ವಿವರಿಸಿದರು.
ವೇದಿಕೆಯ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಅತಿಥಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶ್ರೀಮತಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಎನ್ ಕಟ್ಟಿಮನಿ ಮತ್ತು ಶ್ರೀಮತಿ ಆಶಾದೇವಿ ಜಗದೀಶ ಗುಡಗುಂಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 