ಯುವ ಸಮುದಾಯಕ್ಕೆ ಉಪಯುಕ್ತ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ

ಯುವ ಸಮುದಾಯಕ್ಕೆ ಉಪಯುಕ್ತ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ Organizing a useful program for the youth community is commendable.

ಧಾರವಾಡ 11: ಧಾರವಾಡ, ಉತ್ತರಕನ್ನಡ ಮತ್ತು ಹಾವೇರಿಯಲ್ಲಿ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ವಿಷಯಗಳನ್ನು ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನಟ,ನಿರ್ದೇಶಕರಾದ ಡಾ.ಶಶಿಧರ ನರೇಂದ್ರ ಹೇಳಿದರು.ಅವರು ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ,  ಧಾರವಾಡ ಹಾಗೂ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ್‌ ಗ್ಯಾಲರಿಯಲ್ಲಿ ಚಿತ್ರಕಲೆಯಲ್ಲಿ ಕೃತಕ ಬುದ್ಧಿಮತ್ತೆಯಲ್ಲಿ ಇತ್ತೀಚಿನ ಪ್ರಗತಿಗಳ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿಷ್ಠಾನದ ಮಾರ್ತಾಂಡಪ್ಪ ಕತ್ತಿ ಅವರು ಕಳೆದ 20 ವರ್ಷಗಳಿಂದ ಯುವ ಸಮುದಾಯಕ್ಕೆ ನೂತನವಾದ ಮತ್ತು ಉಪಯುಕ್ತವಾದ ಕಾರ್ಯಕ್ರಮಗಳ ಆಯೋಜನೆಯಿಂದ ಸಮಾಜಕ್ಕೆ ಕೊಡುಗೆ ನೀಡುತ್ತಿರುವುದು ಇತರರಿಗೆ ಮಾದರಿ ಎಂದು ಹೇಳಿದರು.ಚಿತ್ರಕಲೆಯಲ್ಲಿ ಎಐ ಬಳಕೆಯ ಕುರಿತು ಉಪನ್ಯಾಸದಲ್ಲಿ ಎಸ್‌.ಡಿ.ಎಮ್ ಇಂಜಿನಿಯರಿಂಗ್ ಮಹಾವಿದ್ಯಾಲಯದ  ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಲೀನಾ ಐ ಸಕ್ರಿ ಚಿತ್ರಕಲೆಗಳಲ್ಲಿ ನಿಮ್ಮ ಬುದ್ದಿಮತ್ತೆಯ ಕಲ್ಪನೆ ಹಾಗೂ ಕೃತಕತೆಯನ್ನು ಅಳವಡಿಸಿದಾಗ ಸಿಗುವ ಹೊಸ ಕಲ್ಪನೆ ಕ್ರಿಯಾತ್ಮಕತೆ ಹುಟ್ಟುತ್ತದೆ. ಅದನ್ನು ಉಪಯುಕ್ತ ರೀತಿಯಲ್ಲಿ ಮಾತ್ರ ಬಳಸಿಕೊಳ್ಳಿ ಮತ್ತು ಏಐ ಮೇಲೆ ತುಂಬಾ ಅವಲಂಬನೆಯಾಗದೆ ನಮ್ಮ ಮೂಲತತ್ವಕ್ಕೆ ದಕ್ಕೆಯಾಗದಂತೆ ಕಾಯ್ದುಕೊಂಡು ಸೃಜನಶೀಲತೆಯನ್ನು ಹುಟ್ಟುಹಾಕಿಕೊಳ್ಳಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಎಸ್ ಡಿ ಎಂ ಇಂಜಿನಿಯರಿಂಗ್ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಡಾ. ಪುಷ್ಪಲತಾ ಎಸ್ ನಿಕ್ಕಂ ಮಾತನಾಡಿ ಎಐ ಬಳಕೆಯಿಂದ ಚಿತ್ರದ ಗುಣಾತ್ಮಕತೆಯನ್ನು ಹೆಚ್ಚಿಸಬಹುದು. ಇದರಿಂದ ಮಾನವ ಸಂಪನ್ಮೂಲದ ಬಳಕೆ ಕಡಿಮೆಯಾಗುತ್ತದೆ ಎಂಬ ಕಲ್ಪನೆಯಿಂದ ದೂರ ಬನ್ನಿ ಏಕೆಂದರೆ ಎಐದಲ್ಲಿ ಭಾವನೆ, ಅನುಭವ,ಸಂಸ್ಕೃತಿ ಮತ್ತು ವಯಕ್ತಿಕ ಅಭಿವ್ಯಕ್ತಿತ್ವ ಇರುವುದಿಲ್ಲ ಹಾಗಾಗಿ ನೈಜತೆಗೆ ಹೆಚ್ಚು ಬೆಲೆ ಇರುತ್ತದೆ ಎಂದು ಹೇಳಿದರು.ಅಧ್ಯಕ್ಷತೆಯನ್ನು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಸವರಾಜ ಕುರಿಯವರ ವಹಿಸಿಕೊಂಡು ಮಾತನಾಡಿದರು. ಮುಖ್ಯ ಅತಿಥಿಗಳಾದ ಶೀತಲಗೋಲ್ಡಿನ ಮಾಲೀಕರಾದ ಜಯಂತಿಲಾಲ ಜೈನ್,  ಸಮಾವೇಶದ ಸರ್ವಾಧ್ಯಕ್ಷರಾದ ಸಿವಿಲ್ ಅಭಿಯಂತರಾದ ಸುನಿಲ ಬಾಗೇವಾಡಿ, ಪ್ರತಿಷ್ಠಾನದ ಅಧ್ಯಕ್ಷರಾದ  ಎಂ.ಎಸ್‌.ಪರಾಸ್ ಮಾತನಾಡಿದರು.ಪ್ರತಿಷ್ಠಾನದ ಉಪಾಧ್ಯಕ್ಷರಾದ ಸುರೇಶ ಬೆಟಗೇರಿ ಮತ್ತು ಉಪನ್ಯಾಸಕರಾದ ಎಸ್ ಕೆ ಪತ್ತಾರ ನಿರೂಪಿಸಿದರು. ಸಮಾವೇಶದ ಸಂಯೋಜಕರಾದ ಅರುಣ ಕುಮಾರ  ಶೀಲವಂತ ಸ್ವಾಗತಿಸಿದರು. ವಿದ್ಯಾರ್ಥಿನಿ ವೈಷ್ಣವಿ  ಕುಲಕರ್ಣಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ಕೃಷ್ಣಮೂರ್ತಿ ಗೊಲ್ಲರ ವಂದಿಸಿದರು.