ಸಂಘ ಸಂಸ್ಥೆಗಳು ಸಾಧಕರನ್ನು ಗುರುತಿಸಿ ಗೌರವಿಸಬೇಕು: ಸಾಹಿತಿ ಸಂಕಮ್ಮ ಸಂಕಣ್ಣವರ

ಸಂಘ ಸಂಸ್ಥೆಗಳು ಸಾಧಕರನ್ನು ಗುರುತಿಸಿ ಗೌರವಿಸಬೇಕು: ಸಾಹಿತಿ ಸಂಕಮ್ಮ ಸಂಕಣ್ಣವರ Organizations should recognize and honor achievers: Literary writer Sankamma Sankannavara

ಬೆಳಗಾವಿ 28: ನಮ್ಮ ಸಮಾಜ, ಸಂಘ ಸಂಸ್ಥೆಗಳು ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕೆಂದು ಹಾವೇರಿಯ ಹಿರಿಯ ಸಾಹಿತಿ ಸಂಕಮ್ಮ ಸಂಕಣ್ಣವರ ಹೇಳಿದರು.       

ಬೆಳಗಾವಿಯ  ಹೊಂಬೆಳಕು  ಸಾಂಸ್ಕೃತಿಕ ಸಂಘ ಹಾಗೂ ಧಾರವಾಡದ ಶ್ರೀ ಚನ್ನಲೀಲಾ  ಟ್ರಸ್ಟ್‌  ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ 2024ನೇ ಸಾಲಿನ ರಾಜ್ಯಮಟ್ಟದ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಚನ್ನಶ್ರೀ ಪ್ರಶಸ್ತಿ  ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನೈಜ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಂಘ ಹಾಗೂ ಟ್ರಸ್ಟ್‌ ಕಾರ್ಯ ಶ್ಲಾಘನೀಯವೆಂದು ಹೇಳಿದರು.          

ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ಸಾಹಿತಿ ಪ್ರೊ. ಯು. ಎನ್‌. ಸಂಗನಾಳಮಠ ಮಾತನಾಡಿ, ಕನ್ನಡ ಸಾಹಿತ್ಯ ಲೋಕಕ್ಕೆ ಬೆಳಗಾವಿ ಜಿಲ್ಲೆಯ ಸಾಹಿತಿಗಳು, ಸಂಘ ಸಂಸ್ಥೆಗಳು ಅಮೂಲ್ಯ ಕೊಡುಗೆ ನೀಡಿವೆ ಎಂದು ಹೇಳಿದರು.            

ಮುಖ್ಯ ಅತಿಥಿಗಳಾಗಿದ್ದ ಡಾ.ಎ.ಬಿ. ವಗ್ಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಂಬೆಳಕು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಾಹಿತಿ ಸ. ರಾ. ಸುಳಕೂಡೆ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಶಶಿಕಲಾ ಪಾವಸೆ, ಚನ್ನಲೀಲಾ ಟ್ರಸ್ಟ್‌ ಅಧ್ಯಕ್ಷೆ, ಸಾಹಿತಿ ಲೀಲಾ ಕಲಕೋಟಿ, ಸಾಹಿತಿ ಡಾ. ಗೀತಾಂಜಲಿ ಕುರಡಗಿ ಮಾತನಾಡಿದರು.         

ಹಿರಿಯ ನಾಗರಿಕರ ಜೀವಮಾನ ಸಾಧನೆಯ ರಾಜ್ಯ ಮಟ್ಟದ ’ಚನ್ನಶ್ರೀ’ ಪ್ರಶಸ್ತಿಯನ್ನು ಡಾ.ಉಜ್ವಲಾ ಹಿರೇಮಠ, ಎಂ. ಬಿ. ಗೌಡಪ್ಪನವರ ಹಾಗೂ ಆರ್‌. ಆರ್‌. ಸೌದತ್ತೆ ಅವರಿಗೆ ಹಾಗೂ ರಾಜ್ಯಮಟ್ಟದ ’ರಾಷ್ಟ್ರಕೂಟ ಸಾಹಿತ್ಯ ಶ್ರೀ’  ಪ್ರಶಸ್ತಿಯನ್ನು 11 ಜನ ಕವಿ,ಸಾಹಿತಿಗಳಿಗೆ ನೀಡಲಾಯಿತು.           

ಡಾ. ಶಶಿಕಲಾ ಕಾಮೋಜಿ ಅವರ ’ಕರೋನಾ ಕವನಗಳು’ ಹಾಗೂ ಆನಂದ ಹಕ್ಕೆನ್ನವರ ಅವರ ’ಹೃದಯಾಂತರಾಳ’ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಲಾಯಿತು. 12 ಜನ ಕವಿಗಳು ಕವನವಾಚಿಸಿದರು. ಕಾರ್ಯದರ್ಶಿ ಆರ್‌. ಬಿ.ಬನಶಂಕರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಅ. ಬ. ಇಟಗಿ ಆಶಯ ನುಡಿಗಳನ್ನಾಡಿದರು. ಪ್ರೊ. ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು. ಮಮತಾ ಶಂಕರ ವಂದಿಸಿದರು. ಸಂಘ ಹಾಗೂ ಟ್ರಸ್ಟ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು.