ಬೆಳಗಾವಿ, ಜ 22 : ಉತ್ತಮ ಆರೋಗ್ಯ, ಅತ್ಯುತ್ತಮ ಪರಿಸರ ಹಾಗೂ ರೈತರ ಶ್ರೇಯಸ್ಸಿಗಾಗಿ ಸಿರಿಧಾನ್ಯಗಳು ಅವಶ್ಯವಾಗಿದ್ದು, ಈ ಕುರಿತು ಜಾಗೃತಿ ಮೂಡಿಸಲು ಜನವರಿ 25 ಹಾಗೂ 26 ರಂದು ಬೆಳಗಾವಿಯ ಶಿವಬಸವ ನಗರದ ಎಸ್. ಜಿ ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಸರಿಯಾದ ಸಮಯಕ್ಕೆ, ಸೂಕ್ತ ಪ್ರಮಾಣದಲ್ಲಿ ಮಳೆ ಬಾರದೆ ಇರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಜನರು ಅಸಹಜ ಜೀವನಶೈಲಿ ಅಳವಡಿಸಿಕೊಂಡಿರುವ ಕಾರಣದಿಂದ ಅಸಮತೋಲನ ಪೌಷ್ಟಿಕಾಂಶ ಮತ್ತು ಅಲ್ಪನಾರಿನ ಆಹಾರ ಪದಾರ್ಥಗಳನ್ನು ಸೇವಿಸುತ್ತಿರುವುದರಿಂದ ಹಲವಾರು ಮಾರಕ ರೋಗಗಳಿಂದ ಬಳಲುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ನಮ್ಮ ಪಾರಂಪರಿಕ ಬೆಳೆಗಳಾದ ಸಿರಿಧಾನ್ಯಗಳನ್ನು ಕಡಿಮೆ ಫಲವತ್ತತೆ ಹಾಗೂ ಕಡಿಮೆ ಮಳೆಯಲ್ಲಿಯೂ ಬೆಳೆಯಬಹುದಾಗಿದೆ. ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರಗಳಾಗಿದ್ದು, ಇವುಗಳಲ್ಲಿ ಯತೇಚ್ಚವಾದ ನಾರಿನ ಅಂಶ
ಹಾಗೂ ವಿವಿಧ ಪೋಷಕಾಂಶ ಮತ್ತು ಖನಿಜಾಂಶಗಳು ಇರುತ್ತವೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಸಾವಯವ ಮತ್ತು ಸಿರಿಧಾನ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಕೃಷಿಕ ಸಮಾಜ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ಮೇಳ ನಡೆಯಲಿದೆ. ಜ.೨೫ ರಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಮೇಳ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಸಮಾರಂಭದಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮೇಳದಲ್ಲಿ ೭೫ ಮಳಿಗೆಗಳನ್ನು ತೆರೆಯುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಸದರಿ ಮೇಳದಲ್ಲಿ 75 ಕ್ಕೂ ಹೆಚ್ಚು ಮಳಿಗೆಗಳಿದ್ದು ಇವುಗಳಲ್ಲಿ ಸಿರಿಧಾನ್ಯ ಹಾಗೂ ಸಾವಯವ ಪದಾರ್ಥಗಳ ಕುರಿತು ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮಾಹಿತಿ ಮಳಿಗೆಗಳು, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಸಸಿಗಳ ಪ್ರದರ್ಶನ, ಜೇನು ಕೃಷಿ ಪ್ರದರ್ಶನ, ಹಣ್ಣುಗಳಿಂದ ಅಲಂಕೃತ ಕಲಾಕೃತಿಗಳ ಪ್ರದರ್ಶನ ಇದರೊಂದಿಗೆ ಮೇಳದಲ್ಲಿ ಉತ್ತಮ ತಳಿಯ ಎತ್ತು ಹಾಗೂ ಆಡುಗಳ ಪ್ರದರ್ಶನ ಸಹ ಏರ್ಪಡಿಸಲಾಗಿದೆ.
ಮೇಳದಲ್ಲಿ ನಿರಂತರವಾಗಿ ನುರಿತ ತಜ್ಞರು, ಪ್ರಗತಿ ಪರ ರೈತರಿಂದ ಸಾವಯವ ಮತ್ತು ಸಿರಿಧಾನ್ಯ ಕುರಿತು ಪ್ರಚಲಿತ ವಿದ್ಯಮಾನದ ಬಗ್ಗೆ ಉಪನ್ಯಾಸ, ಅನುಭವ ಹಂಚಿಕೆ, ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಮಾತನಾಡಿ, ಸಾವಯವ ಸಿರಿಧಾನ್ಯ ಮೇಳದ ಅಂಗವಾಗಿ ಸಾಂಪ್ರದಾಯಿಕ ಆರೋಗ್ಯಕರ ಆಹಾರಗಳ ಪುನರಾನ್ವೇಷಣೆ ಉದ್ದೇಶದಿಂದ ಜ 24 ಸಿರಿಧಾನ್ಯ ನಡಿಗೆ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೬.೩೦ ಗಂಟೆಗೆ ರಾಣಿ ಚೆನ್ನಮ್ಮ ವೃತ್ತದಿಂದ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನದವರೆಗೆ ಸಿರಿಧಾನ್ಯ ನಡಿಗೆ ನಡೆಯಲಿದೆ. ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೆಕರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೦ ಪ್ರಚಾರಸಾಮಗ್ರಿಗಳನ್ನು ಡಾ.ರಾಜೇಂದ್ರ ಕೆ.ವಿ. ಬಿಡುಗಡೆಗೊಳಿಸಿದರು
ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಬೆಳಗಾವಿ ದೂರವಾಣಿ 0831-2407232 ಹಾಗೂ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ಇವರ ಕಛೇರಿ ದೂರವಾಣಿ 0831-2451422 ಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದರು.