ಮಾರ್ಗಸೂಚಿ ಪ್ರಕಾರ ಕೈಗಾರಿಕೆಗಳ ಆರಂಭಕ್ಕೆ ಅವಕಾಶ: ಸಚಿವ ಸುರೇಶ್ ಅಂಗಡಿ
ಬೆಳಗಾವಿ, ಏ.29,ಎರಡನೇ ಹಂತದ ಲಾಕ್‌ಡೌನ್ ಮುಗಿಯುವ ಮೇ 3 ರ ಬಳಿಕ ಕೇಂದ್ರ ಸರ್ಕಾರ ಕೈಗೊಳ್ಳಲಿರುವ ತೀರ್ಮಾನ ಹಾಗೂ ಮಾರ್ಗಸೂಚಿ ಆಧರಿಸಿ ಕೈಗಾರಿಕೆಗಳನ್ನು ಆರಂಭಿಸಲು ಅನುವು ಮಾಡಿಕೊಡಲಾಗುವುದು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ ನೀಡಿದ್ದಾರೆ.ನಗರದ ಉದ್ಯಮಭಾಗದ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಬುಧವಾರ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮೇ 3ಕ್ಕೆ ಲಾಕ್‍ಡೌನ್ ಮುಗಿದ ಬಳಿಕ ನಮಗೆ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ನೀಡಬೇಕು ಎಂದು ಕೈಗಾರಿಕೋದ್ಯಮಿಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅವರು, ಮುಂಬರುವ ದಿನಗಳಲ್ಲಿ ಕಾರ್ಮಿಕರು-ಕೈಗಾರಿಕೋದ್ಯಮಿಗಳು ಮತ್ತು ಉತ್ಪಾದನೆ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮಾತನಾಡಿದ ಕೈಗಾರಿಕೋದ್ಯಮಿಗಳು, ಕೊರೊನಾ ಭೀತಿಯಿಂದ ಕಾರ್ಮಿಕರು ತಮ್ಮ ತಮ್ಮ ಊರು ಹಾಗೂ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ. ಒಮ್ಮೆ ಹೀಗೆ ಕಾರ್ಮಿಕರು ಹೋದರೆ ನಂತರದ ದಿನಗಳಲ್ಲಿ ತಕ್ಷಣವೇ ಕೈಗಾರಿಕೆ ಪುನರಾರಂಭಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೈಗಾರಿಕೆ ಆರಂಭಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಕೈಗಾರಿಕೆಗಳನ್ನು ಆರಂಭಿಸಲು ತಾವು ಸಿದ್ಧರಿದ್ದು, ಕಾರ್ಮಿಕರಿಗೆ ಪಾಸ್ ಮತ್ತು ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಪೂರೈಸಬೇಕು ಎಂದು ಕೋರಿದರು.
ಸೋಂಕು ಪತ್ತೆಯಾಗಿರುವ ಪ್ರದೇಶದಿಂದ ಕೈಗಾರಿಕೆಗಳು ದೂರದಲ್ಲಿವೆ. ಆದ್ದರಿಂದ ಕೈಗಾರಿಕೆಗಳು ಹಾಗೂ ಕಾರ್ಮಿಕ ಹಿತದೃಷ್ಟಿಯಿಂದ ಕೈಗಾರಿಕೆ ಆರಂಭಿಸಲು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು.
ಕಾರ್ಮಿಕರ ಆರೋಗ್ಯ, ಊಟ-ವಸತಿ ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ಆಯಾ ಕೈಗಾರಿಕೋದ್ಯಮಿಗಳ ಹೊಣೆಯಾಗಿರಲಿದೆ ಎಂದು ವಿವರಿಸಿದರು. ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಜಿಲ್ಲಾ ಕೊವಿಡ್-19 ನೋಡಲ್ ಅಧಿಕಾರಿ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ 