ಬೆಂಗಳೂರು, ನ 4: ಒಂದು ಕಡೆ ಆಪರೇಷನ್ ಕಮಲದ ಆಡಿಯೋ ವಿಚಾರವನ್ನಿಟ್ಟುಕೊಂಡು ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದರೆ ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಹಿಂದೆ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಗೆ ಮರು ಜೀವ ನೀಡಲು ಉಪಾಯ ರೂಪಿಸಿದ್ದಾರೆ. ಯಡಿಯೂರಪ್ಪ ಆಡಿಯೋವನ್ನು ಸುಪ್ರೀಂಕೋರ್ಟ್ಗೆ ಕಾಂಗ್ರೆಸ್ ಸಲ್ಲಿಸುತ್ತಿದ್ದರೆ, ಬಿಜೆಪಿ ಕೂಡ ಕಾಂಗ್ರೆಸ್ ಗೆ ತಿರುಮಂತ್ರ ನೀಡಲು ಗಂಭೀರ ಚಿಂತನೆ ನಡೆಸಿದೆ. ಬಿಜೆಪಿ ಸುಪ್ರೀಂಕೋರ್ಟ್ ಮೊರೆ ಹೋಗಲು ಕಾನೂನು ಸಲಹೆ ಪಡೆದಿದ್ದು, ಕಾಂಗ್ರೆಸ್ ಮಂತ್ರಕ್ಕೆ ಬಿಜೆಪಿ ತಿರುಮಂತ್ರ ನೀಡಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಲೆಳೆಯಲು ಯತ್ನಿಸಿದ್ದ ಸಿದ್ದರಾಮಯ್ಯ, ಧರ್ಮಸ್ಥಳದ ಶಾಂತಿ ವನದಲ್ಲಿ ಭವಿಷ್ಯದ ಬಗ್ಗೆ ಮಾತನಾಡಿದ್ದರು. ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಆಪ್ತರೊಂದಿಗೆ ಚರ್ಚಿಸಿದ್ದ ಆಡಿಯೋ ಬಹಿರಂಗವಾಗಿತ್ತು. ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯಂತೆ ಲೋಕಸಭಾ ಚುನಾವಣಾ ಬಳಿಕ ಮೈತ್ರಿ ಸರ್ಕಾರ ಉರುಳಿದೆ. ಈಗ ಅದೇ ಆಡಿಯೋವನ್ನು ಕಾಂಗ್ರೆಸ್ ವಿರುದ್ಧ ಪ್ರಯೋಗಿಸಲು ಸಿದ್ಧತೆ ನಡೆಸಿರುವ ಯಡಿಯೂರಪ್ಪ,ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿಯವರಿಂದ ಕಾನೂನು ಸಲಹೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.