ಕನ್ನಡ ಮಾತೃ ಭಾಷೆ ಇರುವವರು ಮಾತ್ರ ಕನ್ನಡಿಗರಲ್ಲ : ಡಾ. ಎಂ. ಡಿ. ಒಕ್ಕುಂದ

ಕನ್ನಡ ಮಾತೃ ಭಾಷೆ ಇರುವವರು ಮಾತ್ರ ಕನ್ನಡಿಗರಲ್ಲ : ಡಾ. ಎಂ. ಡಿ. ಒಕ್ಕುಂದ Only those whose mother tongue is Kannada are not Kannadigas: Dr. M. D. Okkunda

             ಧಾರವಾಡ 02:  ಕನ್ನಡ ಮಾತೃ ಭಾಷೆ ಇರುವವರು ಮಾತ್ರ ಕನ್ನಡಿಗರಲ್ಲ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿಯವರು ತಮಿಳು ಭಾಷಿಕರು. ದ.ರಾ ಬೇಂದ್ರೆ ಅವರು ಮರಾಠಿ ಭಾಷಿಕರು, ಶಿವರಾಮ ಕಾರಂತರು ತುಳು ಭಾಷಿಕರಾದರೆ, ಗೀರೀಶ ಕಾರ್ನಾಡರು ಕೊಂಕಣಿ ಭಾಷಿಕರಾಗಿದ್ದರು. ಇವರೆಲ್ಲಾ ಕನ್ನಡಿಗರಲ್ಲ, ಕನ್ನಡಿಗರಾಗಿ ಕನ್ನಡ ಭಾಷೆ, ಸಂಸ್ಕೃತಿಯ ಶ್ರೀಮಂತಿಕೆ ಹೆಚ್ಚಿಸಿದವರಾಗಿದ್ದಾರೆ ಎಂದು ಡಾ. ಎಂ. ಡಿ. ಒಕ್ಕುಂದ ತಿಳಿಸಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು, ಕರ್ನಾಟಕ ರಾಜ್ಯೋತ್ಸವ ತಿಂಗಳು ಪೂರ್ಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ವಾಗ್ಭೂಷಣ ಪತ್ರಿಕೆಯ ಲೋಕಾರೆ​‍್ಣ ಕಾರ್ಯಕ್ರಮದಲ್ಲಿ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. 

ಕರ್ನಾಟಕಕ್ಕೆ ಯಾವುದೇ ಧರ್ಮ, ಜಾತಿಯ ಗಡಿಯ ಹಂಗಿಲ್ಲಾ. ಉದ್ಯೋಗದ ನಿಮಿತ್ತ ಅನೇಕರು ವಿದೇಶಕ್ಕೆ ಹಾಗೂ ನೆರೆಯ ರಾಜ್ಯಕ್ಕೆ ಹೋಗಿ ವಾಸಿಸಿದ ಕನ್ನಡಿಗರೂ ಇದ್ದಾರೆ. ಕಿಟೆಲ್ ಹಾಗೂ ಬಿ. ಎಲ್‌. ರೈಸ್‌ರಂತಹ ಮಹಾಮುತ್ಸದ್ದಿಗಳು ವಿದೇಶಿಯರಾದರೂ ಕನ್ನಡದ ಕಾರ್ಯವನ್ನು ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ಶಿಶುನಾಳ ಶರೀಫರು, ಕವಿ ನಿಸ್ಸಾರ ಅಹಮ್ಮದ್ ಹಾಗೂ ಬಾನು ಮುಸ್ತಾಕ ಮುಸ್ಲಿಂ ಧರ್ಮದವರಾಗಿದ್ದರೂ ಕನ್ನಡಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದರೆ. ಬಾನು ಮುಸ್ತಾಕ ಬೂಕರ ಪ್ರಶಸ್ತಿಗೆ ಭಾಜನರಾಗಿ ಕನ್ನಡಕ್ಕೆ ಕೀರ್ತಿ ತಂದವರಾಗಿದ್ದಾರೆ. 

ಮರಾಠಿಮಯವಾಗಿದ್ದ ಆ ಕಾಲದಲ್ಲಿ ಕನ್ನಡದ ನೆಲದಲ್ಲಿ ಕನ್ನಡಿಗರು ಕನ್ನಡ ಭಾಷೆ ಮಾತನಾಡುವುದೇ ಅಪರಾಧವೆಂಬ ಪರಿಸ್ಥಿತಿ ಇತ್ತು. ಸಂಧಿಗ್ದ ಸಮಯದಲ್ಲಿ ಕನ್ನಡಿಗರಲ್ಲಿ ಅಭಿಮಾನ ಹಾಗೂ ಜಾಗೃತಿ ಮೂಡಿಸಲು ಕ.ವಿ.ವ ಸಂಘವು 1890ರಲ್ಲಿ ಹುಟ್ಟಿಕೊಂಡಿತು. 1896ರಲ್ಲಿ ಕ.ವಿ.ವ ಸಂಘವು ಸಾಹಿತ್ಯದ “ವಾಗ್ಭೂಷಣ” ಎಂಬ ಮುಖವಾಣಿ ಪತ್ರಿಕೆ ಪ್ರಾರಂಭಿಸಿತು. ಪತ್ರಿಕೆ ಪ್ರಕಟಣೆ ಪ್ರಾರಂಭದಲ್ಲಿ ಅನೇಕ ಏಳು-ಬೀಳುಗಳ ಮಧ್ಯ 23 ವರ್ಷ ನಿರಂತರವಾಗಿ ಪ್ರಕಟಣೆಯಾಗಿ, ಆರ್ಥಿಕ ಸಂಕಷ್ಟ ಮತ್ತೆ ಎದುರಾಗಿ ನಿಲ್ಲುವ ಪರಿಸ್ಥಿತಿ ಬಂದಿತು. ಈ ಪತ್ರಿಕೆ ಉಳಿವಿಗಾಗಿ ಆಲೂರ ವೆಂಕಟರಾಯರು ಪಟ್ಟಶ್ರಮ ಎದುರಿಸಿದ ಸಮಸ್ಯೆ ಅಷ್ಟಿಷ್ಟಲ್ಲಾ. ಆದರೆ ಇಂತಹ ಪತ್ರಿಕೆ ಈಗಿನ ಆಡಳಿತ ಮಂಡಳಿ ಮತ್ತೆ ಪ್ರಾರಂಭಿಸಿದೆ. ಇದರ ಉಳಿವಿಗಾಗಿ ಈ ಪತ್ರಿಕೆಗೆ ತನ್ನದೇ ಒಂದು ಸಂಚಿತ ನಿಧಿ ಇರಬೇಕು, ಪತ್ರಿಕೆ ಓದುವ ಚಂದಾದಾರರ ಸಂಖ್ಯೆ ಹೆಚ್ಚಾಗಬೇಕು ಪತ್ರಿಕೆಗೆ ಆರ್ಥಿಕ ಭದ್ರತೆ ಅಗತ್ಯವಾಗಿದೆ ಎಂದರು. 

ಸಾನಿಧ್ಯ ವಹಿಸಿದ್ದ ಭೈರನಟ್ಟಿ ದೊರೆಸ್ವಾಮಿ ಮಠದ ಮ.ನಿ.ಪ್ರ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿ ಕ.ವಿ.ವ ಸಂಘ ಭಾರತದ ಭೂಪಟದಲ್ಲಿ ಕರ್ನಾಟಕದ ನಕ್ಷೆ ಮೂಡಿಸಲು, ಕನ್ನಡ ಉದಯವಾಗಲು ಕಾರಣವಾದದ್ದು. ಕರ್ನಾಟಕ ಎಂಬ ಹೆಸರಿನ ಕಲ್ಪನೆಯೇ ಇಲ್ಲದಾಗ ಈ ಸಂಘ ‘ಕರ್ನಾಟಕ’ ಎಂಬ ಹೆಸರಿನಿಂದ ಉದಯವಾಯಿತು. ಈ ವಾಗ್ಭೂಷಣ ಎಂಬ ಕ.ವಿ.ವ ಸಂಘದ ಪತ್ರಿಕೆ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ದಿಕ್ಸೂಚಿಯಾಗಿತ್ತು. ಕನ್ನಡದ ಕಾಶಿ, ಕನ್ನಡಿಗರ ಕೂಡಲಸಂಗಮ ಎಂದು ಬಣ್ಣಿಸಿದರು. 

ಕಾರ್ಯಕ್ರಮದಲ್ಲಿ ಡಾ. ವಾಯ್‌. ಎಂ. ಭಜಂತ್ರಿ, ಡಾ. ವೆಂಕಟೇಶ ಮುತಾಲಿಕ, ಪ್ರೊ. ಎ. ಐ. ಮುಲ್ಲಾ, ಪ್ರೊ. ಎಂ. ಎಸ್‌. ಗಾಣಿಗೇರ, ಡಾ. ರೇಖಾ ಜೋಗುಳ, ಪ್ರೊ. ಧನವಂತ ಹಾಜವಗೋಳ, ಪ್ರೊ. ಸಿ. ವ್ಹಿ. ಕಣಬರ್ಗಿ ಮುಂತಾದವರನ್ನು ಕ.ವಿ.ವ ಸಂಘದ ಪರವಾಗಿ ಆತ್ಮೀಯತೆಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಸಂಪಾದಕರ ಪರವಾಗಿ ಪ್ರೊ. ಧನವಂತ ಹಾಜವಗೋಳ, ಪ್ರಾಚಾರ್ಯರ ಪರವಾಗಿ ಡಾ. ರೇಖಾ ಜೋಗುಳ ಮಾತನಾಡಿದರು. ಕ.ವಿ.ವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. 

ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಸ್ತಾಪಿಸಿ, ವಂದಿಸಿದರು. ಶಂಕರ ಕುಂಬಿ ನಿರೂಪಿಸಿದರು. ವೇದಿಕೆಯಲ್ಲಿ ಸತೀಶ ತುರಮರಿ, ಶ್ರೀನಿವಾಸ ವಾಡಪ್ಪಿ, ಇದ್ದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಡಾ. ಶೈಲಜಾ ತ. ಅಮರಶೆಟ್ಟಿ, ವಿಶ್ವೇಶ್ವರಿ ಬ. ಹಿರೇಮಠ, ವೀರಣ್ಣ ಒಡ್ಡೀನ, ಪ್ರೊ. ಶಶಿಧರ ತೋಡಕರ, ಡಾ. ಜಿನದತ್ತ ಅ. ಹಡಗಲಿ, ದಾನಪ್ಪ ಕಬ್ಬೇರ, ಎಂ. ಎಂ. ಚಿಕ್ಕಮಠ, ಗುರು ತಿಗಡಿ,  ಸದೇರಿದಂತೆ ಮಂಟಪದ ಸಲಹಾ ಸಮಿತಿ ಸದಸ್ಯರೂ ಇದ್ದರು. ಪ್ರಾರಂಭದಲ್ಲಿ ಸೋಮಲಿಂಗ ಜಾಲಿಹಾಳ, ನಾಗಲಿಂಗ ಪಾಟೀಲ ಹಾಗೂ ಪರಶುರಾಮ ಕಟ್ಟಿಸಂಗಾವಿ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು.