ಎಲ್ಲರೂ ಗಟ್ಟಿ ಹೆಜ್ಜೆ ಹಾಕಿದರೆ ಮಾತ್ರ ನಾಡಹಬ್ಬದ ಗತ ವೈಭವ ಮತ್ತೆ ಮರಳಲು ಸಾಧ್ಯ: ಮಾನೆ

ಎಲ್ಲರೂ ಗಟ್ಟಿ ಹೆಜ್ಜೆ ಹಾಕಿದರೆ ಮಾತ್ರ ನಾಡಹಬ್ಬದ ಗತ ವೈಭವ ಮತ್ತೆ ಮರಳಲು ಸಾಧ್ಯ: ಮಾನೆ           Only if everyone takes firm steps can the past glory of the National Festival be restored: Mane

ಹಾನಗಲ್ 23: ನಾಡಹಬ್ಬ ನಮ್ಮ ಸಾಂಸ್ಕೃತಿಕ ಹೆಮ್ಮೆ. ಇಡೀ ರಾಜ್ಯದಲ್ಲಿಯೇ ಮೈಸೂರು ದಸರೆಯ ನಂತರ ದೀರ್ಘ ಕಾಲದ ಅರ್ಥಪೂರ್ಣ ಹಬ್ಬ ಆಚರಣೆ ಮಾಡಿರುವುದು ಇಲ್ಲಿನ ಹಿತಿಹಾಸ. ಎಲ್ಲರೂ ಜೊತೆಗೂಡಿ ಗಟ್ಟಿ ಹೆಜ್ಜೆ ಹಾಕಿದರೆ ಮಾತ್ರ ಹಾನಗಲ್ ನಾಡಹಬ್ಬದ ಗತ ವೈಭವ ಮತ್ತೆ ಮರಳಲು ಸಾಧ್ಯ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.  ಇಲ್ಲಿ ಸೋಮವಾರ 88 ನೇ ನಾಡಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾಡಹಬ್ಬವನ್ನು ಸಡಗರ, ಸಂಭ್ರಮದ ಜೊತೆಗೆ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಬಹಳ ಮುಕ್ತ ಮನಸ್ಸಿನಿಂದ ಪ್ರಯತ್ನಿಸಿದ್ದೇನೆ. ಆದರೆ ಬೇರೆ ಬೇರೆ ಬೆಳವಣಿಗೆಗಳನ್ನು ಕಂಡು ಮೌನವಾಗಿದ್ದೇನೆ. ಈಗಲೂ ಕಾಲ ಮಿಂಚಿಲ್ಲ. ರಾಜ್ಯದ ಗಣ್ಯಾತಿಗಣ್ಯರಿಂದ ಹಾನಗಲ್ ನಾಡಹಬ್ಬ ಮೆಚ್ಚುಗೆಗೆ ಪಾತ್ರವಾಗಿದೆ. ಹಾನಗಲ್ಲ ನೆಲದ ಇತಿಹಾಸ ಹಾಗೂ ಘನತೆಯನ್ನು ನೆನಪಿಸುವಂತೆ ಈ ನಾಡಹಬ್ಬ ಮಾಡಿದೆ. ಅದನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು ಕೂಡಿ ಹೆಜ್ಜೆ ಹಾಕೋಣ. ಎಲ್ಲ ಸಹಕಾರ ನನ್ನಿಂದ ಇದೆ ಎಂದರು.  ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಚಿನ್ನದಂತಹ ಕನ್ನಡ ನಾಡಿನ ಹಿರಿಮೆ, ಸೌಂದರ್ಯವನ್ನು ಬೆಳೆಸಿ ನೈಸರ್ಗಿಕ ಸೊಬಗನ್ನು ಉಳಿಸಬೇಕಾಗಿದೆಯೇ ಹೊರತು, ದುರಾಸೆಗೆ ಕೊಳ್ಳೆ ಹೊಡೆದು ಹಾಳು ಮಾಡಬಾರದು. ಎಲ್ಲ ಸಂಪತ್ತನ್ನು ಈ ನಾಡು ನಮಗಾಗಿ ನೀಡಿದೆ.  

ಆದರೆ ನಾಡ ಸೊಬಗು ಹೆಚ್ಚಿಸುವ ಬದಲು ಇಲ್ಲಿನ ಖನಿಜ, ಗುಡ್ಡ ಬೆಟ್ಟ ಗಳನ್ನು ಕೊಳ್ಳೆ ಹೊಡೆದು ನಮ್ಮದುರಾಸೆಯನ್ನು ತೀರಿಸಿಕೊಳ್ಳುತ್ತಿದ್ದೇವೆ. ನದಿಗಳಿಂದ ರಮಣೀಯವಾಗಿರುವ ಕನ್ನಡ ನಾಡಿನಲ್ಲಿ ಕವಿ ಮಹಾಶಯರು ನಾಡನ್ನು ಹಾಡಿ ಹೊಗಳಿದ್ದಾರೆ. ಇಲ್ಲಿನ ಸಂಸ್ಕೃತಿ ವೈಭವನ್ನು ಎಲ್ಲರೂ ಆನಂದಿಸಿದ್ದಾರೆ.  

ಇದು ಸಾಹಿತ್ಯ, ಸಂಸ್ಕೃತಿ ಕಲೆಯಿಂದ ಶ್ರೀಮಂತಗೊಂಡ ನಾಡಾಗಿದೆ. ಕರ್ನಾಟಕ ಸಂಗೀತ ಎಂಬ ಸಂಗೀತ ವೈಭವವೇ ಇಲ್ಲಿಂದ ಆರಂಭವಾಗಿದೆ. ಈಗ ಮಠಾಧೀಶರು ಸತ್ಯ, ಧರ್ಮ ಬೋಧನೆಗೆ ಮುಂದಾಗಬೇಕಾದ ಕಾಲ. ಆದರೆ ಮಠಗಳು ಆತಂಕದಲ್ಲಿವೆ. ಭಕ್ತರು ಮಠ ಹಾಗೂ ಧಾರ್ಮಿಕ ಸಂಸ್ಕೃತಿಯನ್ನು ಉಳಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.  ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೆ.ಎಲ್‌.ದೇಶಪಾಂಡೆ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ತಾಲೂಕು ತಹಶೀಲ್ದಾರ್ ರೇಣುಕಾ ಎಸ್‌., ನಾಡಹಬ್ಬ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ವಿಜಯಕುಮಾರ ದೊಡ್ಡಮನಿ, ಸಿದ್ದನಗೌಡ ಪಾಟೀಲ, ಟಾಕನಗೌಡ ಪಾಟೀಲ, ಅಶೋಕ ಹಲಸೂರ, ಮಂಜು ಗೊರಣ್ಣನವರ ಅತಿಥಿಗಳಾಗಿದ್ದರು. 

ನಿಖಿತಾ ಮಾಳಗಿ ಪ್ರಾರ್ಥನೆ ಹಾಡಿದರು. ನ್ಯಾಯವಾದಿ ಎಸ್‌.ಎಂ.ಕೋತಂಬರಿ ಸ್ವಾಗತಿಸಿದರು.ಮಾರುತಿ ಶಿಡ್ಲಾಪೂರ ಪ್ರಾಸ್ತವಿಕವಾಗಿ ಮಾತನಾಡಿದರು. ಡಿ.ಜೆ.ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.  

1937 ರಲ್ಲಿ ಹಾನಗಲ್‌ನಲ್ಲಿ ಆರಂಭಗೊಂಡ ನಾಡಹಬ್ಬದಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ತೆರಳುತ್ತಿದ್ದ ಹೋರಾಟಗಾರರಿಗೆ ತರಬೇತಿ ನೀಡಲಾಗಿದೆ. ದೇಶಾಭಿಮಾನ, ನಾಡಾಭಿಮಾನ ಬೆಳೆಸುವ ಉದ್ದೇಶದಿಂದ ಹಿರಿಯರು ಆರಂಭಿಸಿದ ನಾಡಹಬ್ಬದ ಪಾವಿತ್ರ್ಯತೆ, ಪ್ರತಿಷ್ಠಿತೆ ಹೆಚ್ಚಿಸಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕಿದೆ

- ಶ್ರೀನಿವಾಸ ಮಾನೆ, ಶಾಸಕ