ಲಿಂಗ ಕಟ್ಟಿದಾಕ್ಷಣ ಲಿಂಗಾಯತ ಎನಿಸಿಕೊಳ್ಳುವುದಿಲ್ಲ

ಲಿಂಗ ಕಟ್ಟಿದಾಕ್ಷಣ ಲಿಂಗಾಯತ ಎನಿಸಿಕೊಳ್ಳುವುದಿಲ್ಲ  One does not become a Lingayat just by getting a lingam

     ಶಿಗ್ಗಾವಿ 03: ಕೇವಲ ಲಿಂಗ ಕಟ್ಟಿದಾಕ್ಷಣ ಲಿಂಗಾಯತ ಎನಿಸಿಕೊಳ್ಳುವುದಿಲ್ಲ ವ್ಯಕ್ತಿಯಲ್ಲಿರುವ ಆಚಾರ ಪರಂಪರೆಗಳೆಲ್ಲವೂ ಸಾತ್ವಿಕತೆಯಿಂದ ಕೂಡಿರಬೇಕು ಅಂದಾಗ ಲಿಂಗಾಯತ ಎಂದು ಎನಿಸಿಕೊಳ್ಳಲು ಸಾದ್ಯವಿದೆ ಎಂದು ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ವಿರಕ್ತಮಠದಲ್ಲಿ 9 ದಿನಗಳ ಕಾಲ ನಡೆಯಲಿರುವ 33 ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ "ಷಟಸ್ಥಲ ಧ್ವಜಾರೋಹಣ" ನೆರವೇರಿಸಿ ಮತನಾಡಿದ ಶ್ರೀಗಳು, ಷಟಸ್ಥಲ ದ್ವಜಾರೋಹಣ ಎಂದರೆ ನನ್ನ ಧರ್ಮವನ್ನ, ದೇವರನ್ನ ಮತ್ತು ನನ್ನ ಗುರುವನ್ನ ರಕ್ಷಣೆ ಮತ್ತು ಶಿರಭಾಗಿ ನಡೆದುಕೊಳ್ಳುತ್ತೇನೆ ಅದಕ್ಕೆ ತಪ್ಪಿ ನಡೆದರೆ ನಿಮ್ಮಾಣೆ ನಿಮ್ಮ ಪ್ರಮತರಾಣೆ ಎಂಬ ಗಹನ ಶಕ್ತಿ ಅಡಗಿದೆ ಎಂದರು. 

ಕಠಿಣ ಮನಸ್ಸು ಮತ್ತು ಕಠಿಣ ಮನೋಭಾವ ಇದ್ದವನು ಎಂದಿಗೂ ಲಿಂಗದ ಆರಾಧಕ ಆಗಲು ಸಾಧ್ಯವಿಲ್ಲ, ಪ್ರೀತಿಯನ್ನ ಕೊಟ್ಟು ಪ್ರೀತಿಯನ್ನ ಬೆಳಗುವ ಮನೋಭಾವದಲ್ಲಿ ನಾವು ಇರಬೇಕು, ಸದಾಚಾರಗಳು ಸಾತ್ವಿಕ ಹಾದಿಯಲ್ಲಿ ಸರಳೋಪಾದಿಯಲ್ಲಿ ಸದಾಚಾರದ ಸಂಪನ್ನರಾಗಿ ನಾವು ಇರಬೇಕು, ಸರಳತೆಯ ಸದಾಚಾರದ ಲಿಂಗ ಪೂಜೆಯನ್ನ ನಮ್ಮ ಹಿರಿಯರು ಕಲಿಸಿಕೊಟ್ಟಿದ್ದಾರೆ, ಲಿಂಗ ಕಟ್ಟಿಕೊಂಡು ಅಪವಿತ್ರ ಕ್ಷೇತ್ರಗಳಿಗೆ ಹೋಗಬಾರದು ಎಂಬ ನಂಬಿಕೆ ನಮ್ಮವರಲ್ಲಿ ಇದೆ, ಅದು ತಪ್ಪು, ಲಿಂಗವನ್ನು ಕಟ್ಟಿ ನಾವು ಹೋದ ಸ್ಥಳವೆಲ್ಲವೂ ಲಿಂಗದಿಂದ ಪವಿತ್ರವಾಗಲು ಸಾಧ್ಯವಿದೆ ಎಂಬ ಸಿದ್ದಾಂತವನ್ನು ನಾವು ಮನಗಾಣಬೇಕಿದೆ ಎಂದರು. 

ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಮೊದಲು ಮನಶುದ್ಧಿ ಮಾಡಿಕೊಂಡು ಅಂದಕಾರದಿಂದ ಬೆಳಕಿನತ್ತ ಹೋಗಲು ಪೂಜೆಯಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಲು ಸಾದ್ಯವಿದೆ, ಲಿಂಗ ಪೂಜೆ ಕೇವಲ ವಿಧಾನವಲ್ಲ ಆತ್ಮಶುದ್ಧಿಗಾಗಿ ಮಾಡುವ ಪೂಜೆಯಾಗಿದೆ ಎಂದ ಶ್ರೀಗಳು 9 ದಿನಗಳ ವರೆಗೆ ನಡೆಯುವ ಶರಣ ಸಂಸ್ಕೃತಿಯಲ್ಲಿ ಭಾಗವಹಿಸಿ ಎಂದರು. 

        ಮಠದ ಉತ್ತರಾಧಿಕಾರಿ ಬಸವಲಿಂಗ ದೇವರು, ಶರಣ ಸಾಹಿತ್ಯ ಪರಿಷತ್ ಅದ್ಯಕ್ಷ ಸಿ ಡಿ ಯತ್ನಳ್ಳಿ, ಕಸಾಪ ಅದ್ಯಕ್ಷ ನಾಗಪ್ಪ ಬೆಂತೂರ, ನಿವೃತ್ತ ಶಿಕ್ಷಕ ಪಿ ಬಿ ತೆಂಬದಮನಿ ವಿಶ್ವನಾಥ ವಾಲಿಸೆಟ್ಟರ್, ಶಂಬು ಕೇರಿ ಸೇರಿದಂತೆ ಶಿಗ್ಗಾವಿ ಪಟ್ಟಣದ ಶ್ರೀಮಠದ ಭಕ್ತರು ಇದ್ದರು.