ಬಸವ ಜಯಂತಿ ಪ್ರಯುಕ್ತ “ಬಸವ ಭಾಷೆ ಪ್ರವಚನ” ದಿನಾಂಕ 05.04.2026 ರಿಂದ 19.04.2026 ರವರೆಗೆ ಒಟ್ಟು 15 ದಿನ ನಡೆಯಲಿದೆ

ಬಸವ ಜಯಂತಿ ಪ್ರಯುಕ್ತ “ಬಸವ ಭಾಷೆ ಪ್ರವಚನ” ದಿನಾಂಕ 05.04.2026 ರಿಂದ 19.04.2026 ರವರೆಗೆ ಒಟ್ಟು 15 ದಿನ ನಡೆಯಲಿದೆ On the occasion of Basava Jayanti, “Basava Bhashe Pravachana” will be held from 05.04.2026 to 19.04.

ಲೋಕದರ್ಶನ ವರದಿ  

 ಕೊಪ್ಪಳ 12: ಶರಣಧರ್ಮದಲ್ಲಿ ನುಡಿದಂತೆ ನಡೆವುದಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಆಚಾರ ಪ್ರಧಾನ ಧರ್ಮ ಇದು. ಮೈ ಮಾತು-ಮನಗಳು ಪರಸ್ಪರ ಪೂರಕವಾಗಿ ಒಂದಾಗಿ ಇರಬೇಕು. ಮನದೊಳಗೊಂದು, ಮಾತಿನಲಿ ಮತ್ತೊಂದು, ಕ್ರಿಯೆಯಲ್ಲಿ ಇನ್ನೊಂದಾದರೆ ವ್ಯಷ್ಟಿ(ವ್ಯಕ್ತಿ) ಮತ್ತು ಸಮಷ್ಟಿ (ವಿಶ್ವ)ಗಳಲ್ಲಿ ಅಸಮತೋಲನ ಉಂಟಾಗುವುದು. ಅದರ ಪರಿಣಾಮದಿಂದ ಅಸಮಾಧಾನ, ಅಸಮಾಧಾನದಿಂದ ಅಶಾಂತಿ, ಅಶಾಂತಿಯಿಂದ ಮನಸ್ಸು ಚಂಚಲ, ಚಂಚಲತೆಯುಕ್ತವಾದ ಮನದಲ್ಲಿ ದೇವರು ನೆಲೆಯೂರುವುದಿಲ್ಲ.  ಮನದ ಚಂಚಲತೆ ನಿಲ್ಲಬೇಕಾದರೆ ನಡೆ ನುಡಿಗಳಲ್ಲಿ ತೆರಹಿಲ್ಲದಿರಬೇಕು.  

ಉನ್ನತೋನ್ನತ ನುಡಿಗಳನ್ನು ನುಡಿಯುತ್ತ, ನಡೆ ಮಾತ್ರ ಶೂನ್ಯವಾದರೆ ;  “ನೂರನೋದಿ ನೂರ ಕೇಳಿದರೇನು? ಮಾತಿನಂತೆ ಮನವಿಲ್ಲದ ಜಾತಿ ಡೊಂಬರನು ಮೆಚ್ಚನು” ಎಂಬಂತೆ ದೇವರು ಮೆಚ್ಚುವುದಿಲ್ಲ. ಮಾತಿನಂತೆ ನಡೆಯುವುದು ಕರ್ತವ್ಯ. ಹಕ್ಕು ಚಲಾಯಿಸಿ ಕರ್ತವ್ಯ ಮರೆತರೆ ಕಾನೂನಿನ ದೃಷ್ಟಿಯಲ್ಲಿ ಅಪರಾಧ. ಪರಮಾತ್ಮನ ಸಂವಿಧಾನದಲ್ಲಿ ಮಾತಿನಲ್ಲಿ ದಿಟ, ಆಚರಣೆಯಲ್ಲಿ ಸಟೆಯಾದರೆ, ಹಿಡಿದಿರುವ ಲಿಂಗವೇ ಘಟಸರ​‍್, ನಡೆ-ನುಡಿ ಒಂದಾದವರನ್ನು ಕಂಡರೆ ಬಸವಣ್ಣನವರಿಗೆ ಎಲ್ಲಿಲ್ಲದ ಆನಂದ. ಬಸವಣ್ಣನವರು, ಆಚಾರಕ್ಕೆ ಮೊದಲ ಸ್ಥಾನ ನೀಡಿದರು. ಅವರಿಗೆ ಆಚಾರವೇ ಲಿಂಗ. ಆಚಾರವೇ ಸ್ವರ್ಗ ಅನಾಚಾರವೇ ನರಕ. ಆಚಾರಲಿಂಗವಿಡಿದವರಿಗೆ ಮಾತ್ರ ಅನುಭಾವ ಸಿದ್ಧಿ ಸಾಧ್ಯ. ನಡೆನುಡಿ ಒಂದಾಗಿರದಿದ್ದಲ್ಲಿ ಅದು ಸಮಾಜದ ಮೇಲೂ ಕೆಟ್ಟ ಪರಿಣಾಮವಾಗುತ್ತದೆ.  ಸಮಾಜದ ಬಹುಪಾಲು ಜನರನ್ನು ಸುಖಕ್ಕಿಂತ ಶೋಷಣೆಗೆ ಒಳಗಾಗುತ್ತಾರೆ. 

ಇದನ್ನು ಗಮನಿಸಿದ ಬಸವಣ್ಣನವರು ದೇವಭಕ್ತ ಎಂಬುದಕ್ಕೆ ಚಿಹ್ನವೆಂದಡೆ ಸತ್ಯವನ್ನು ನುಡಿಯುವುದು, ನುಡಿದಂತೆ ನಡೆವುದು. ಹುಸಿಯ ನುಡಿವುದು, ನುಡಿದು ತಪ್ಪುವುದು ಭಕ್ತರ ಲಕ್ಷಣವಲ್ಲ. ಅವರು ವೇಷಗಾರರು. ನುಡಿದಂತೆ ನಡೆಯದವರು ವಚನ ಪಾತಕಿಗಳು. ನುಡಿ ಬೆಲ್ಲ ನಡೆ ನಂಜಾದರೆ ಬಾಳೆಲ್ಲ ಗಂಜಳ. ನಡೆ ನುಡಿಗಳು ತಕ್ಕಡಿಯ ಎರಡು ಪರಡಿಯಂತೆ. ಅವು ಯಾವಾಗಲೂ ಸಮ ಸಮವಾಗಿ ತೂಗಬೇಕೆಂಬುದು ಬಸವಣ್ಣನವರ ಆಶಯ. “ಭಕ್ತಿ ಸುಭಾಷೆಯ ನುಡಿಯ ನುಡಿವೆ ನುಡಿದಂತೆ ನಡೆವೆ ನುಡಿಯೊಳಗೆ ನಡೆಯ ಪೂರೈಸುವೆ ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀನೆದ್ದು ಹೋಗು ಕೂಡಲಸಂಗಮದೇವ” ; ಇದು ಬಸವಣ್ಣನವರು ದೇವರಿಗೆ ಕೊಡುವ ಭಾಷೆ.   ಸತ್ಯದ ಪ್ರೇಮದ ಮಾತುಗಳನ್ನೆ ಆಡಬೇಕು. ಆಡಿದಂತೆ ನಡೆದು ತೋರಬೇಕು.

ಮಾತು ಮತ್ತು ಕೃತಿಗಳ ತಕ್ಕಡಿಯ ತೂಗು ತ್ರಾಸು ಕಟ್ಟಳೆ ದೇವನ ಕೈಯಲ್ಲಿ ಇರಲಿ. ಬೇಕಾದಂತೆ ಪರೀಕ್ಷಿಸಲಿ. ಒಂದು ಜವೆಯಷ್ಟು ಕೂಡಾ ನಡೆ-ನುಡಿಯಲ್ಲಿ ವ್ಯತ್ಯಾಸವಾಗಕೂಡದೆಂಬುದು ಅವರ ನಿರ್ಣಯ. ನುಡಿಯಹೊಣೆಗಾರಿಕೆಯ ಅರಿವು ಅದೆಷ್ಟು ಜಾಗ್ರತವಾಗಿರಬೇಕೆಂಬುದಕ್ಕೆ ಇದು ನಿದರ್ಶನ. “ನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿ, ಆ ನಡೆ ನುಡಿ ಎರಡರ ಚೆನ್ನ ಮೃಢ ನಿಮ್ಮೊಳಗಡಗಿಸಿ, ತಾವೆಡೆಯಿಲ್ಲದೆ ಪರಿಪೂರ್ಣರಾದವರ, ಪಡುಗವ ಹೊರುವೆ ಕೈಯ ಹಿಡಿವೆ, ಎನಗಿದೆ ಮಾಟ ಪಾದರಕ್ಷೆಯ ದಾ ಬಯಸುವ ಬೇಟ ಕೂಡಲಸಂಗಮದೇವಾ ಇದು ನಿಮ್ಮ ಕೂಡುವ ಕೂಟ” ; ನಡೆ-ನುಡಿ ಚೆನ್ನಾದವರಿಗೆ ಬಸವಣ್ಣನವರು ಕೊಡುವ ಗೌರವ ಇದು.  ನಡೆ-ನುಡಿ ಒಂದಾದವರು ಪರಿಪೂರ್ಣ ಮಾನವರಾಗುತ್ತಾರೆ. ಅಷ್ಟೇ ಅಲ್ಲ, ಕಾಯಗೊಂಡ ದೇವರೇ ಆಗುತ್ತಾರೆ.

ಅವರ ಸೇವೆ ಲಿಂಗದ ಸೇವೆಯೇ. ಅವರು ಉಗುಳುವ ಪಾತ್ರೆ ಹೊರುವ, ಪಾದರಕ್ಷೆ ಹಿಡಿವ ಸೇವೆಯಾದರೂ ಶ್ರದ್ದೆಯಿಂದ ಮಾಡಬೇಕು, ಎಂಬಲ್ಲಿ ಶರಣರು ನಡೆ ನುಡಿಗೆ ಕೊಟ್ಟ ಪ್ರಾಮುಖ್ಯತೆಯ ಅರಿವಾಗುತ್ತದೆ. ಬಸವಣ್ಣನವರು ಹೇಳಿದಂತೆ ನುಡಿದು, ತಪ್ಪದೇ ನಡೆದು ಹುಸಿಯದ ಶ್ರೇಷ್ಠ ಜನಾಂಗ ನಿರ್ಮಾಣವಾಗಬೇಕು. ಸತ್ಯವಚನ ನುಡಿದು, ಸದಾಚಾರದಲ್ಲಿ ನಡೆವವನೇ ಶ್ರೇಷ್ಠನೆನಿಸುತ್ತಾನೆ. ನುಡಿದ ನುಡಿಯನ್ನು ಪೂರೈಸುವುದು ಪ್ರಾಣಕ್ಕಿಂತ ಪ್ರಿಯವಾಗಬೇಕು. ಬಸವಣ್ಣನವರಂತೆ ನುಡಿಯ ಭಾಷೆ ನಮ್ಮೆಲ್ಲರದಾಗಬೇಕು. ಎಲ್ಲರೂ ಅಂತೆಯೆ ಆಚರಿಸಿದರೆ, ಅತಿ ದುಬಾರಿ ಖರ್ಚುಗಳಾಗಿ, ಸಮಾಜಕ್ಕೆ ಹೊರೆಯಾಗಿರುವ ನ್ಯಾಯಾಲಯ, ಪೋಲಿಸ್, ಮೇಲ್ವಿಚಾರಣಾ ಸಮಿತಿಗಳು, ಲೋಕಾಯುಕ್ತ ವ್ಯವಸ್ಥೆ ಮುಂತಾದವುಗಳ ಅಗತ್ಯವೇ ಇರುವುದಿಲ್ಲ. ಒಮ್ಮೆ ನಮಗೆ ನಾವೇ ಅವಲೋಕನ ಮಾಡಿಕೊಳ್ಳೋಣವೇ ? ನುಡಿದಂತೆ ನಡೆವ ಭಾಷೆ ಬಸವಣ್ಣನವರಿಗೆ ನೀಡುವ ಮೂಲಕ, ಅವರ ಆಚಾರ ಪ್ರಧಾನ ಮಾರ್ಗದ ಸದಸ್ಯರಾಗೋಣ. ಸುಂದರ ವಿಶ್ವ ನಿರ್ಮಾಣ ಮಾಡೋಣ.