ಕ್ರಾಂತೀವೀರ ಬೆಳವಡಿ ವಡ್ಡರ ಯಳ್ಳಣ್ಣ ವೃತ್ತ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ

ಕ್ರಾಂತೀವೀರ ಬೆಳವಡಿ ವಡ್ಡರ ಯಳ್ಳಣ್ಣ ವೃತ್ತ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ Official approval for the construction of the Krantiveera Belavadi Waddara Yallanna Circle

ಲೋಕದರ್ಶನ ವರದಿ

 ಮಹಾಲಿಂಗಪುರ 10: ನಗರದ ಜಿ.ಎಲ್‌.ಬಿ.ಸಿ. ಸಮೀಪ ಕ್ರಾಂತೀವೀರ ಬೆಳವಡಿ ವಡ್ಡರ ಯಳ್ಳಣ್ಣ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಮಹಾಲಿಂಗಪುರ ಪುರಸಭೆ ಅಧಿಕೃತವಾಗಿ ಅನುಮೋದನೆ ನೀಡಿದ್ದು, ಅದರ ಆದೇಶದ ಪ್ರತಿಯನ್ನು ಶಾಸಕ ಸಿದ್ದು ಸವದಿ ಅವರ ಸಮ್ಮುಖದಲ್ಲಿ ಭೋವಿ ಸಮಾಜದ ಮುಖಂಡರಿಗೆ ಹಸ್ತಾಂತರಿಸಲಾಯಿತು.  

ನಗರದಲ್ಲಿ ಹಲವು ವರ್ಷಗಳಿಂದ ಭೋವಿ ಸಮಾಜದ ವತಿಯಿಂದ ಕ್ರಾಂತೀವೀರ ಬೆಳವಡಿ ವಡ್ಡರ ಯಳ್ಳಣ್ಣ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಒತ್ತಾಯಿಸಿ ನಿರಂತರ ಹೋರಾಟ ನಡೆಸಲಾಗುತ್ತಿತ್ತು. ಸಮಾಜದ ಮುಖಂಡರು, ಯುವಕರು ಹಾಗೂ ಸಂಘಟನೆಯ ಪದಾಧಿಕಾರಿಗಳು ಹಲವು ಬಾರಿ ಮನವಿ ಸಲ್ಲಿಸಿ, ಸಭೆಗಳನ್ನು ನಡೆಸುವ ಮೂಲಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದಿದ್ದರು. ಇದೀಗ ಪುರಸಭೆ ಸಭೆಯಲ್ಲಿ ವೃತ್ತ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ ದೊರೆತಿರುವುದು ಸಮಾಜದಲ್ಲಿ ಸಂತಸ ಮೂಡಿಸಿದೆ.  

ಈ ಸಂಬಂಧ ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ, ಪುರಸಭೆ ಮುಖ್ಯಾಧಿಕಾರಿ ಎನ್‌.ಎ. ಲಮಾಣಿ ಹಾಗೂ ಅಧಿಕಾರಿಗಳು ಅನುಮೋದನೆ ಪತ್ರವನ್ನು ಭೋವಿ ಸಮಾಜದ ಮುಖಂಡರಿಗೆ ಹಸ್ತಾಂತರಿಸಿದರು.  

ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಶೇಖರ ಅಂಗಡಿ, ಭೋವಿ ಸಮಾಜದ ಮುಖಂಡರಾದ ಹನಮಂತ ಜಮಾದಾರ, ದುಂಡಪ್ಪ ನಾಗನೂರ, ಪ್ರಕಾಶ ಪಾಟ್ರೋಟ್, ಸಂತೋಷ ಪಾಟ್ರೋಟ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.  

ಈ ವೇಳೆ ಮಾತನಾಡಿದ ಸಮಾಜದ ಮುಖಂಡರು, "ಇದು ಭೋವಿ ಸಮಾಜದ ಏಕತೆ ಹಾಗೂ ನಿರಂತರ ಹೋರಾಟಕ್ಕೆ ದೊರೆತ ಫಲವಾಗಿದೆ. ವೃತ್ತ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಬೇಕು. ಕ್ರಾಂತೀವೀರ ಬೆಳವಡಿ ವಡ್ಡರ ಯಳ್ಳಣ್ಣ ಅವರ ತ್ಯಾಗ ಮತ್ತು ಹೋರಾಟದ ಇತಿಹಾಸ ಮುಂದಿನ ಪೀಳಿಗೆಗೂ ಪರಿಚಯವಾಗುವಂತಾಗಬೇಕು" ಎಂದು ಆಗ್ರಹಿಸಿದರು.  

ವೃತ್ತ ನಿರ್ಮಾಣಕ್ಕೆ ಅನುಮೋದನೆ ನೀಡಿದ ಶಾಸಕ ಸಿದ್ದು ಸವದಿ, ಪುರಸಭೆ ಮುಖ್ಯಾಧಿಕಾರಿ ಹಾಗೂ ಸದಸ್ಯರಿಗೆ ಭೋವಿ ಸಮಾಜದ ಮುಖಂಡರು ಕೃತಜ್ಞತೆ ಸಲ್ಲಿಸಿದರು. ಈ ನಿರ್ಧಾರದಿಂದ ಸಮಾಜದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದ್ದು, ಸಮಾಜದ ಸದಸ್ಯರು ಸಂಭ್ರಮ ವ್ಯಕ್ತಪಡಿಸಿದರು.