ಓಲ್ಡೆನ್ಬರ್ಗ್ 31: ಸಾಮಾನ್ಯವಾಗಿ ನಮಗೆ
ಬೋರ್ ಆದರೆ ಏನು ಮಾಡುತ್ತೇವೆ? ಕೆಲವರು ಪುಸ್ತಕ ಓದುತ್ತಾರೆ, ಸಂಗೀತ ಕೇಳುತ್ತಾರೆ, ಡ್ಯಾನ್ಸ್
ಮಾಡುತ್ತಾರೆ, ಟಿವಿ ನೋಡುತ್ತಾರೆ, ಮೊಬೈಲ್ನಲ್ಲಿ ಗೇಮ್ ಆಡುತ್ತಾರೆ, ಯಾರಾದರೂ ಗೆಳೆಯರೊಟ್ಟಿಗೆ
ಮಾತನಾಡುತ್ತಾರೆ, ಇನ್ನು ಕೆಲವರು ಶಾಪಿಂಗ್ ಮಾಡಿ ಕೂಡ ಬೇಸರ ನಿವಾರಿಸಿಕೊಳ್ಳುತ್ತಾರೆ. ಇನ್ನೂ ವಿಚಿತ್ರವೆಂಬಂತೆ
ಬೋರ್ ಆದಾಗಲೆಲ್ಲ ಏನಾದರೂ ತಿನ್ನುವ, ಸಿಕ್ಕವರ ಜೊತೆಗೆ ಜಗಳವಾಡುವವರೂ ಇದ್ದಾರೆ.
ಇಂತಹ ಅಭ್ಯಾಸಗಳನ್ನೇ ನೀವು 'ಇದ್ಯಾಕೋ ಅತಿಯಾಯ್ತು' ಅಂತ ಭಾವಿಸಿದ್ದರೆ ಖಂಡಿತ ಈ ಸುದ್ದಿ ಓದಲೇಬೇಕು.
ಜರ್ಮನ್ನ ಓರ್ವ ನರ್ಸ್ ತನಗೆ ಬೋರ್ ಆಯಿತು ಎಂಬ ಕಾರಣಕ್ಕೆ ಬರೋಬ್ಬರಿ 100 ಜನರ ಜೀವ ತೆಗೆದಿದ್ದಾನಂತೆ!
ಓಲ್ಡನ್ಬರ್ಗ್ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದ ನೀಲ್ಸ್ ಹೋಗಲ್ ಎಂಬ ವ್ಯಕ್ತಿ 100 ರೋಗಿಗಳ
ಜೀವ ತೆಗೆಯುವ ಮೂಲಕ ಸರಣಿ ಹಂತಕ ಎಂಬ ಕುಖ್ಯಾತಿ ಗಳಿಸಿದ್ದಾನೆ. 41 ವರ್ಷದ ಹೋಗಲ್ ತಾನು ಈ ಹತ್ಯೆ
ಮಾಡಿದ್ದಾಗಿ ಒಪ್ಪಿಕೊಂಡಿದ್ದರಿಂದ ಆತನಿಗೆ ಜೀವಾವಧಿ ಶಿಕ್ಷೆ ನೀಡಿ ಜೈಲಿನಲ್ಲಿ ಇರಿಸಲಾಗಿತ್ತು.
ಈಗಾಗಲೇ 10 ವರ್ಷಗಳ ಶಿಕ್ಷೆ ಪೂರ್ಣಗೊಳಿಸಿರುವ ಆತ ತನಗೆ ಬೋರ್ ಆಗುತ್ತಿದೆ ಎಂಬ ಕಾರಣಕ್ಕೆ ಬೇಕೆಂದೇ
ರೋಗಿಗಳಿಗೆ ಓವರ್ಡೋಸ್ ಔಷಧಗಳನ್ನು ನೀಡಿ ಅವರ ಸಾವಿಗೆ ಕಾರಣವಾಗಿದ್ದ.
100 ರೋಗಿಗಳಿಗೂ ಈತ ಇದೇ ಕ್ರಮವನ್ನು ಅನುಸರಿಸಿದ್ದ. ಮೊದಲು ಕಾರ್ಡಿಯಾಕ್ ಅರೆಸ್ಟ್ ಆಗುವಂತೆ ಔಷಧವನ್ನು
ಇಂಜೆಕ್ಟ್ ಮಾಡುತ್ತಿದ್ದ. ಆನಂತರ ಅವರ ಜೀವ ಉಳಿಸಲು ಯಾವ್ಯವಾಉದೋ ಔಷಧಗಳನ್ನು ಪ್ರಯೋಗ ಮಾಡುತ್ತಿದ್ದ.
ತನ್ನ ವೈದ್ಯಕೀಯ ಕೌಶಲವನ್ನು ತೋರಿಸಿಕೊಳ್ಳುವ ಉದ್ದೇಶದಿಂದ ಹೋಗಲ್ ಈ ರೀತಿ ಮಾಡುತ್ತಿದ್ದ ಎನ್ನಲಾಗಿದೆ.
ಈ ರೀತಿಯಾಗಿ ಆತನಿದ್ದ ಆಸ್ಪತ್ರೆಗೆ ದಾಖಲಾದ 34ರಿಂದ 96 ವರ್ಷದ ಒಟ್ಟು 100 ರೋಗಿಗಳು ಹೋಗಲ್ನಿಂದ
ಸಾವನ್ನಪ್ಪಿದ್ದಾರೆ.
ಮೊದಲು ಈ ರೀತಿಯಾಗಿ ಐವರನ್ನು ಹೋಗಲ್ ಸಾಯಿಸಿದ್ದಾರೆ ಎಂದು ನ್ಯಾಯಾಲಯ ಆತನಿಗೆ 15 ವರ್ಷ ಜೈಲು ಶಿಕ್ಷೆ
ನೀಡಿತ್ತು. ಆದರೆ, ನಂತರ ಆತನನ್ನು ಕೌನ್ಸಿಲಿಂಗ್ಗೆ ಒಳಪಡಿಸಿದಾಗ ಮನಶಾಸ್ತ್ರಜ್ಞರ ಬಳಿ ತಾನು
ಹೀಗೆ ಸರಣಿ ಕೊಲೆಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದರಿಂದ ಜೀವಾವಧಿ ಶಿಕ್ಷೆ ನೀಡಲಾಯಿತು.