ಕೊರೋನಾ ತಪಾಸಣಾ ಪ್ರಯೋಗಾಲಯಗಳ ಸಂಖ್ಯೆ 50 ಕ್ಕೆ ಏರಿಕೆ: ಮಾಧುಸ್ವಾಮಿ

ಹಾಸನ, ಏ.15,ಸಾರ್ವಜನಿಕರು ಮಾಸ್ಕ್ ಧರಿಸದೆ ಹೊರಗಡೆ ಬಂದರೆ ಅಪರಾಧ ಎಂದು  ಪರಿಗಣಿಸಲಾಗುತ್ತದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಮತ್ತು  ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಎಚ್ಚರಿಸಿದ್ದಾರೆ.ಜಿಲ್ಲಾಧಿಕಾರಿ  ನ್ಯಾಯಾಲಯ ಸಭಾಂಗಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನತೆ ಏ.20 ರವರೆಗೆ ಕಟ್ಟುನಿಟ್ಟಾಗಿ ಲಾಕ್ ಡೌನ್ ನಿಯಮಗಳನ್ನು  ಪಾಲಿಸಬೇಕು.  ಸಾರ್ವಜನಿಕರು ಮನೆಯಲ್ಲೇ ತಯಾರಿಸಿದ ಮಾಸ್ಕ್ ಅಥವಾ  ಕರವಸ್ತ್ರ, ಟವೆಲ್, ದುಪ್ಪಟ್ಟಗಳಿಂದ ಮೂಗು ಮತ್ತು ಬಾಯಿ ಮುಚ್ಚಿಕೊಂಡು ಅಗತ್ಯವಿದ್ದಾಗ  ಮಾತ್ರ ರಸ್ತೆಗೆ ಬರಬೇಕು ಎಂದು ಹೇಳಿದರು.
ಲಾಕ್  ಡೌನ್ ಸಂದರ್ಭದಲ್ಲಿ ಕಾಮಗಾರಿ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ  ಕಾರ್ಯಗಳನ್ನು ನಡೆಸಲು ಅವಕಾಶವಿದೆ. ಆದರೆ ಮೈಮರೆತು ನಿಯಮ ಉಲ್ಲಂಘಿಸಿದರೆ ವ್ಯತಿರಿಕ್ತ  ಪರಿಣಾಮಗಳಾಗುತ್ತವೆ. ಸಾಮಾಜಿಕ ಅನಾರೋಗ್ಯ ತಲೆ ದೂರುತ್ತದೆ ಹಾಗಾಗಿ  ಎಚ್ಚರಿಕೆಯಿಂದಿರಬೇಕಿದೆ ಎಂದರು.ಕೊವೀಡ್-19  ತಡೆಗಟ್ಟಲು ರಾಜ್ಯ ಸರ್ಕಾರದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಅನುಸರಿಸುತ್ತಿದ್ದು,  ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿಗಳ ನೇತೃತ್ವದಲ್ಲಿ ದಾನಿಗಳನ್ನು ಹುಡುಕಿ ಕೊರೋನಾ ನಿಯಂತ್ರಣ ಕ್ರಮಗಳ  ಅನುಷ್ಠಾನಕ್ಕೆ ಅಗತ್ಯ ನೆರವು ಪಡೆಯಲು ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು  ಹೇಳಿದರು.ಅಗತ್ಯ  ಕೆಲಸವಿದ್ದಲ್ಲಿ ಮನೆಯಿಂದ ಒಬ್ಬರು ಆಚೆ ಬರುವಂತೆ ನಿಯಮ ಮಾಡಲಾಗುವುದು ಎಂದ ಸಚಿವ  ಮಾಧುಸ್ವಾಮಿ, ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಒಂದೂವರೆ ಲಕ್ಷ ಮಾಸ್ಕ್ ಗಳನ್ನು  ತಯಾರಿಸಲು ಯೋಜನೆ ರೂಪಿಸಿದ್ದು, ದಾನಿಗಳು ಸ್ವಯಂ ಸೇವಾ ಸಂಸ್ಥೆಗಳಡಿಯಲ್ಲಿ ಈ ಕಾರ್ಯ  ಸಾಗಲಿದೆ ಎಂದರು.
ಮೇ  ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ 10 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಬೆಳೆ  ನೀಡಲಾಗುತ್ತದೆ. ಆನ್ ಲೈನ್ ನಲ್ಲಿ ವ್ಯಾಪಾರ ವಹಿವಾಟು ಮಾಡುವ ಮೂಲಕ ಜನರು  ಅಗತ್ಯ ವಸ್ತುಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗುವುದು. ಆ ಮೂಲಕ ಸಾರ್ವಜನಿಕರು  ರಸ್ತೆಗೆ ಬರುವುದನ್ನು ನಿಯಂತ್ರಿಸಲಾಗುವುದು ಎಂದು ಸಚಿವರು ತಿಳಿಸಿದರು.ಸಾಮಾನ್ಯ  ಜ್ವರ, ಕೆಮ್ಮು ಇದ್ದವರೆಲ್ಲ ಕೊರೋನಾ ಸೋಂಕಿತರೆಂದು ಭೀತರಾಗುವ ಅಗತ್ಯವಿಲ್ಲ. ಆದರೆ  ಮುಂಜಾಗ್ರತೆಗಾಗಿ ಆ ಲಕ್ಷಣಗಳು ಕಂಡುಬಂದವರನ್ನು ತಪಾಸಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೊರೋನಾ ತಪಾಸಣಾ ಪ್ರಯೋಗಾಲಯಗಳನ್ನು 50 ಕ್ಕೆ ಏರಿಸಲಾಗಿದೆ ಎಂದು ಅವರು  ಹೇಳಿದರು.ಸರಕು  ಸಾಮಾನುಗಳನ್ನು ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಹಾಸನ ಜಿಲ್ಲೆಯಲ್ಲಿ ಕೊರೋನಾ  ಪಾಸಿಟಿವ್ ಇಲ್ಲದ್ದರಿಂದ ಏ.20  ರ ನಂತರದಲ್ಲಿ ಕೃಷಿ, ಕಾಫಿ ತೋಟದ ಚಟುವಟಿಕೆಗಳಿಗೆ  ಅವಕಾಶ ನೀಡಲಾಗುತ್ತದೆ. ಆದರೆ ಹೋಟೆಲ್, ಸಾರ್ವಜನಿಕ ಸಾರಿಗೆ, ಚಿತ್ರಮಂದಿರ, ಸೂಪರ್  ಮಾರ್ಕೆಟ್ ಗಳಂತಹ ಜನ ಸೇರುವ ಸ್ಥಳಗಳನ್ನು ತೆಗೆಯಲಾಗುವುದಿಲ್ಲ ಎಂದು ಸಚಿವರು  ಸ್ಪಷ್ಟಪಡಿಸಿದರು.ಜಿಲ್ಲೆಯಾದ್ಯಂತ  ಕೊರೋನಾ ವೈರಸ್ ಪರಿಣಾಮವನ್ನು ನಿಯಂತ್ರಣಕ್ಕೆ ತರುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್  ಇಲಾಖೆ ಪ್ರಾಮಾಣಿಕವಾಗಿ ಅಗತ್ಯ ಕ್ರಮಗಳನ್ನು ಅನುಸರಿಸಿದ್ದು, ಮುಂದೆಯೂ ಏ.20 ರವರೆಗೆ  ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕ್ರಮವಹಿಸಿ ಜಿಲ್ಲೆಯ ಜನತೆಯ ರಕ್ಷಣೆ ಮಾಡಬೇಕು ಎಂದು   ಜೆ.ಸಿ. ಮಾಧುಸ್ವಾಮಿ ನಿರ್ದೇಶನ ನೀಡಿದರು.ಲಾಕ್  ಡೌನ್ ಪರಿಣಾಮಗಳು ಏನೇ ಇದ್ದರೂ ಜಿಲ್ಲೆಯ ಜನತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು  ಸಚಿವರು ಶ್ಲಾಘಿಸಿದರಲ್ಲದೆ, ಮುಂದೆಯೂ ಇದೇ ರೀತಿ ಸಹಕಾರ ನೀಡುವ ಮೂಲಕ ಕೊರೋನಾ ಸೋಂಕು  ಜಿಲ್ಲೆಗೆ ಬಾರದಂತೆ ಜಾಗ್ರತೆ ವಹಿಸುವಂತೆ ಮನವಿ ಮಾಡಿದರು.