ಬೆಂಗಳೂರು, ಏ.18, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಎಲ್ಲಾ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಬಹಿರಂಗ ಪತ್ರ ಬರೆದು ಸಹಕಾರ ಕೋರಿದ್ದಾರೆ. ಮಾತ್ರವಲ್ಲ ಸೋಂಕು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಸಂಕಷ್ಟ ನೀಗಿಸಲು ಮಾಡಿರುವ ಕೆಲಸ ಕಾರ್ಯಗಳ ಸುದೀರ್ಘ ಪಟ್ಟಿಯನ್ನು ಸಹ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.ಕೊರೋನಾ ವೈರಾಣು ಇಡೀ ಜಗತ್ತಿನ ಜನ ಸಮೂಹಕ್ಕೆ ಇಂದು ದೊಡ್ಡ ಕುತ್ತಾಗಿ ಪರಿಣಮಿಸಿದೆ. ಜಗತ್ತಿನ ಇತಿಹಾಸದಲ್ಲಿ ನಮ್ಮ ಪೂರ್ವಿಕರೂ ಸಹ ಇಂತಹ ಸೋಂಕನ್ನು ಪರಿಸ್ಥಿತಿಯನ್ನು ಎದುರಿಸಿದ್ದಿಲ್ಲ. ಈ ಸೋಂಕಿನ ಬಗ್ಗೆ ಚೀನಾದಿಂದ ಬಂದ ಸುದ್ದಿಗಳನ್ನು ಕೇಳಿದಾಗ ಜಗತ್ತಿನ ಯಾವುದೇ ದೇಶ ಮತ್ತು ಯಾರೂ ಸಹ ಈ ವೈರಾಣು ನಮ್ಮನ್ನು ಕಂಡು ಕೇಳರಿಯದ ದುರಂತ ಪರಿಸ್ಥಿತಿಗೆ ತಳ್ಳುತ್ತದೆ ಎಂದು ಭಾವಿಸಿರಲಿಲ್ಲ. ಈ ರೋಗದ ಗಂಭೀರತೆ ಬಗ್ಗೆ ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ. ಇದನ್ನು ಅರಿತೇ ನಾವು ಸೋಂಕನ್ನು ತಡೆಗಟ್ಟಲು ಸಮರೋಪಾದಿಯಲ್ಲಿ ಸಜ್ಜಾಗಿ ಕಾರ್ಯಪ್ರವೃತ್ತರಾದೆವು. ದೇಶದಲ್ಲಿ ನಾವೇ ಮೊದಲ ಬಾರಿಗೆ ಲಾಕ್‌ಡೌನ್ ಮಾಡಲು ನಿರ್ಧರಿಸಿ, ಅದನ್ನು ಜಾರಿ ಮಾಡಿದೆವು. ಅಂದರೆ ಒಂದು ತಿಂಗಳ ಹಿಂದೆ ತೆಗೆದುಕೊಂಡ ನಮ್ಮ ಅಚಲ ನಿರ್ಧಾರ ಇಂದು ನಮಗೆ ರಾಜ್ಯದಲ್ಲಿ ಸೋಂಕನ್ನು ನಿಯಂತ್ರಣದಲ್ಲಿ ಇಡಲು ಸಹಾಯಕವಾಗಿದೆ.
ನಮ್ಮ ರಾಜ್ಯವು ತೆಗೆದುಕೊಂಡ ಮುಂಜಾಗೃತಾ
ಕ್ರಮಗಳನ್ನು ಬೇರೆ ರಾಜ್ಯಗಳು ಅನುಸರಿಸುತ್ತಿವೆ. ನಾವು ನಮ್ಮ ಕ್ರಮಗಳಬಗ್ಗೆ
ಸಮಾಧಾನಪಡದೆ ರೋಗ ನಿರ್ವಹಿಸಲು ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು
ಜಾರಿಗೊಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಎಲ್ಲಾ ನಿಯಮಗಳನ್ನು
ಗಮನದಲ್ಲಿಟ್ಟುಕೊಂಡು ಮುಂದುವರಿದಿದ್ದೇವೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ
ತಿಳಿಸಿದ್ದಾರೆ.
ಈ ಕೆಲಸದಲ್ಲಿ ಸಚಿವರು, ರಾಜ್ಯಮಟ್ಟದ ಅಧಿಕಾರಿಗಳು,
ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಿಶೇಷವಾಗಿ ವೈದ್ಯಕೀಯ ಇಲಾಖೆಯ
ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು
ಮತ್ತು ಪೌರಕಾರ್ಮಿಕರು ಹಗಳಿರುಳು ಕೊರೋನಾ ಸೋಂಕು ಹರಡದಂತೆ ಶ್ರಮಿಸುತ್ತಿದ್ದಾರೆ.
ಅವರೆಲ್ಲರಿಗೂ ಈ ಸಂದರ್ಭದಲ್ಲಿ ನಾನು ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು
ಮುಖ್ಯಮಂತ್ರಿ ತಿಳಿಸಿದ್ದಾರೆ.
ಇನ್ನು ನಾವು ವೈರಾಣು ಹರಡದಂತೆ ತಡೆಗಟ್ಟಲು ಬಹಳ
ದೂರ ಸಾಗಬೇಕಾಗಿದೆ. ರೋಗದ ವಿರುದ್ಧ ಹೋರಾಟ ಒಂದು ಕಡೆ ಜನರ ನೆಮ್ಮದಿಯನ್ನು ಹಾಳು
ಮಾಡಿದೆ. ಇನ್ನೊಂದು ಕಡೆ ರಾಜ್ಯದ ಆರ್ಥಿಕ ವ್ಯವಸ್ಥೆ ಕುಸಿಯುವಂತೆ ಮಾಡಿದೆ. ಆದರೆ ನಾವು
ಕೈ ಕಟ್ಟು ಕುಳಿತಿಲ್ಲ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ರೋಗ ನಿಯಂತ್ರಣಕ್ಕೆ
ಹಾಗೂ ಜನರಿಗೆ ಅಗ್ಯ ಸೇವೆ ಮತ್ತು ವಸ್ತುಗಳನ್ನು ಪೂರೈಸಲು ಗರಿಷ್ಠ ಕ್ರಮಗಳನ್ನು
ಕೈಗೊಂಡಿದ್ದೇವೆ. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಮತ್ತು ಹಲವಾರು ಸಮಾಜ
ಸೇವಾ ಸಂಸ್ಥೆಗಳು ಸಹ ನಮ್ಮ ಜೊತೆ ಕೈಜೋಡಿಸಿವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಈಗ
ನಮಗೆ ಪರೀಕ್ಷಾ ಸಮಯ. ನಾನು ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಯಾವುದೇ ವಿಷಯದಲ್ಲಿ
ಹಿಂದೆ ಬಿದ್ದಿಲ್ಲ. ಹಾಗಂತ ನಾನೊಬ್ಬನೆ ಈ ಸಮಯದಲ್ಲಿ ತೊಡಗಿಲ್ಲ. ಇದರಲ್ಲಿ ನಿಮ್ಮದು
ಪಾಲು ಇದೆ. ನೀವು ಕೂಡ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಜನರಿಗೆ ಸಾಕಷ್ಟು ಸಹಾಯ ಮತ್ತು
ಸೇವೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಿಮಗೂ ಕಡೂ ನನ್ನ ಅಭಿನಂದನೆಗಳು.
ನಿಮ್ಮ ಸಹಕಾರ ಹೀಗೆ ಮುಂದುವರಿಯಲಿ. ನಿಮ್ಮ ಸಹಕಾರವಿದ್ದರೆ ಎಂತಹುದೇ ದುರಂತಕಾರಿ
ಸಮಸ್ಯೆಯನ್ನು ತಹಬದಿಗೆ ತರಬಹುದು ಎಂದು ಅವರು ಹೇಳಿದ್ದಾರೆ.
ಈ ವೈರಾಣುವಿನ
ನಿಯಂತ್ರಣಕ್ಕೆ ಮಾಡಿದ ಎಲ್ಲಾ ಕಾರ್ಯಕ್ರಮಗಳ ಮತ್ತು ವೆಚ್ಚದ ಬಗ್ಗೆ ಸಂಕ್ಷಿಪ್ತ
ವಿವರಗಳನ್ನು ನಿಮ್ಮ ಅವಗಾಹನೆಗೆ ತರುತ್ತಿದ್ದೇನೆ. ಇದರ ಜೊತೆಗೆ ಬೇಸಿಗೆ ಕಾಲದಲ್ಲಿ
ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ.ಎಲ್ಲಾ
ಶಾಸಕ ಮಿತ್ರರಲ್ಲಿ ನನ್ನ ವಿನಂತಿ ಏನಂದರೆ ನಿಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೆ ಈ
ಕಷ್ಟದ ದಿನಗಳಲ್ಲಿ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ದೈನಂದಿನ
ಜೀವನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸರ್ಕಾರ ಒದಗಿಸುತ್ತಿರುವ ಅಗತ್ಯ
ವಸ್ತುಗಳನ್ನು ಅರ್ಹರಿಗೆ ತಲುಪಿಸುವಂತೆ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಮನವಿ
ಮಾಡಿದ್ದಾರೆ.