ಈಗ ಡಿಜಿಟಲ್ ಯೋಗ ದಿನ : ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಜೂನ್ 21, ಯೋಗ ದಿನ ಕೂಡ ಇದೀಗ ಡಿಜಿಟಲ್ ಆಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಬಿಕ್ಕಟ್ಟಿನಿಂದಾಗಿ ಜನರು ಒಂದೆಡೆ ಸೇರದೇ ಯೋಗ ದಿನ ಆಚರಿಸುವಂತಾಗಿದೆ.ಪ್ರಾಣಾಯಾಮ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲದಾಗಿದೆ. ಇದು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಉಸಿರಾಟಕ್ಕೆ ಪಾಡುಪಡಬೇಕಾದಂತಹ ಸ್ಥಿತಿ ಇದ್ದು ಪ್ರಾಣಾಯಾಮ ಅಭ್ಯಾಸ ಮಾಡುವುದು ಅತಿ ಸೂಕ್ತ. ಅಲ್ಲದೇ ಯೋಗಾಭ್ಯಾಸದ ಹಲವು ಆಸನಗಳು ಕೂಡ ಉತ್ತಮ ಆರೋಗ್ಯ ಹೊಂದಲು ಸಹಕಾರಿ, ಹೀಗಾಗಿ ಯೋಗ ಜನರಿಗೆ ಆರೋಗ್ಯ ರಕ್ಷಣೆ ನೀಡಬಲ್ಲದಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.ಆರೋಗ್ಯಕರ ಭೂಮಿಗಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು. ಯೋಗ ಜಾತಿ, ವರ್ಣ, ಧರ್ಮ ಭೇದವನ್ನು ಮೀರಿದ್ದು ಎಂದು ಪ್ರಧಾನಿ ಹೇಳಿದರು.2015 ರಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ದಿವನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಯಿತು. ಈ ಬಾರಿ ಕೊರೊನಾ ಬಿಕ್ಕಟ್ಟಿನ ನಡುವೆಯೇ ಆರನೇ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಯೋಗ ದಿನದ ಶುಭ ಕೋರಿದ್ದಾರೆ.ಮನೆಯಲ್ಲಿಯೇ ಯೋಗ ಮತ್ತು ಕುಟುಂಬದವರೊಂದಿಗೆ ಯೋಗ ಈ ಬಾರಿಯ ಯೋಗ ದಿನ ಧ್ಯೇಯವಾಕ್ಯವಾಗಿದೆ.ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಯೋಗಾಭ್ಯಾಸ ಮಾಡಿದರೆ ಮನೆಯಲ್ಲಿಯೇ ಶಕ್ತಿ ಹೊಮ್ಮುತ್ತದೆ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾಸಮಸ್ತಾ ಸುಖಿನೋ ಭವಂತು ಅಂದರೆ ಇಡೀ ಜಗತ್ತಿನ ಜನರು ಸುಖವಾಗಿರಲಿ ಎಂದು ತಮ್ಮ ಭಾಷಣದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.