ಬೆಳೆನಷ್ಟ ಪರಿಹಾರ ಅಂದಾಜಿಗೆ ಸೂಚನೆ: ಎಸ್‌.ಟಿ.ಸೋಮಶೇಖರ್

ಚಿತ್ರದುರ್ಗ, ಏ.18, ಹೂವು, ಹಣ್ಣುಗಳು ಹಾಗೂ ತರಕಾರಿಗಳ ಬೆಳೆ ನಷ್ಟಕ್ಕೆ ಪರಿಹಾರ ಕೊಡುವ ಸಂಬಂಧ ನಷ್ಟದ  ಅಂದಾಜು ಮಾಡಲು  ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ರೈತರು ತಾವು  ಬೆಳೆದ ತೋಟಗಾರಿಕಾ ಉತ್ಪನ್ನಗಳನ್ನು ನಗರಗಳಿಗೆ ತಂದು ಮುಕ್ತವಾಗಿ ಮಾರಾಟ ಮಾಡಲು ಯಾವುದೇ  ಅಡೆತಡೆಗಳು ಇಲ್ಲ. ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿಗಳು  ಬದ್ಧ  ಎಂದು ಸಚಿವರು ತಿಳಿಸಿದರು.
ಬೇರೆ  ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ.  ನಮ್ಮ  ಪ್ರಧಾನಮಂತ್ರಿಗಳು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವಿರೋಧ  ಪಕ್ಷಗಳ ಸಲಹೆ- ಸೂಚನೆಗಳನ್ನು ಪರಿಗಣಿಸಿ ಕಾರ್ಯನಿರ್ವಹಿಸುತ್ತಿರುವುದನ್ನು ಇಡೀ ದೇಶದ  ಜನತೆ ಪ್ರಶಂಸಿಸುತ್ತಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕರ್ನಾಟಕ  ರಾಜ್ಯದಲ್ಲೂ ಸಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೋನಾ  ನಿಯಂತ್ರಣಕ್ಕಾಗಿ ಹತ್ತು ಹಲವು ಬಿಗಿ ನಿಲುವುಗಳನ್ನು ಕೈಗೊಂಡಿದ್ದು, ಸಾರ್ವಜನಿಕರು  ಸರ್ಕಾರದ ಜೊತೆ ಕೈಜೋಡಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ಮೈಸೂರು  ಜಿಲ್ಲೆಯ ನಂಜನಗೂಡಿನಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಜಿಲ್ಲಾಡಳಿತ  ಕೈಗೊಳ್ಳಲು ಸೂಚಿಸಲಾಗಿದೆ.  ಜಿಲ್ಲಾಡಳಿತ 24/7 ಮಾದರಿಯಲ್ಲಿ   ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಔಷಧಿ - ಮಾತ್ರೆಗಳು ಸಾರ್ವಜನಿಕರಿಗೆ ಯಾವುದೇ  ತೊಂದರೆಯಾಗದಂತೆ ಮೆಡಿಕಲ್ ಶಾಪ್ ಗಳಿಗೆ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ  ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಬಹುಮುಖ್ಯವಾಗಿ ಸಾರ್ವಜನಿಕರು  ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದೆಂದು ಮೈಸೂರು ಜಿಲ್ಲೆಯ ಜನತೆಯಲ್ಲಿ ಮನವಿ  ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ಮುರುಘಾಮಠಕ್ಕೆ ಭೇಟಿ, ಶ್ರೀಗಳ ಆಶೀರ್ವಾದ ಚಿತ್ರದುರ್ಗ  ಮುರುಘಾಮಠಕ್ಕೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಶ್ರೀ  ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು. ಶಾಸಕರಾದ ತಿಪ್ಪಾರೆಡ್ಡಿ  ಉಪಸ್ಥಿತರಿದ್ದರು. ಇದೇ ವೇಳೆ,  ಬಡವರಿಗೆ ಶ್ರೀಮುರುಘಾ ಮಠದಿಂದ ಕೊಡಮಾಡುವ ಆಹಾರ ಸಾಮಗ್ರಿಗಳನ್ನು ಸಚಿವರು ವಿತರಿಸಿದರು.
ಈ  ಸಂದರ್ಭದಲ್ಲಿ ಮಾತನಾಡಿದ ಮುರುಘಾ ಶರಣರು, ಸಚಿವರಾದ ಸೋಮಶೇಖರ್ ಅವರು ಶ್ರೀ ಮಠದ ಜೊತೆ  20 ವರ್ಷಗಳಿಂದ ಅವಿನಾಭಾವ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಅವರು ಸಚಿವರಾಗಿರುವುದು  ಸಂತಸದ ವಿಚಾರ. ಅವರು ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.
ಕೊರೋನಾ  ಹಿನ್ನೆಲೆಯಲ್ಲಿ ಅನೇಕ ಬಡವರು ಊಟಕ್ಕೆ ಪರದಾಡುತ್ತಿದ್ದಾರೆ. ಇಂಥವರಿಗೋಸ್ಕರ ಮಠದಿಂದ  ಪ್ರತಿದಿನ ಆಹಾರ ಸಾಮಗ್ರಿಯನ್ನು ಕೊಡುತ್ತಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಶ್ರೀಮಠದ ಕಾರ್ಯ ಶ್ಲಾಘನೀಯ
ನಾನು  ಸುಮಾರು 22 ವರ್ಷ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮವನ್ನು  ಮಾಡಿದ್ದೇನೆ. ಕೊರೋನಾ ಸನ್ನಿವೇಶದಲ್ಲಿ ಮಾನವೀಯತೆಯ ದೃಷ್ಟಿಯಿಂದ ಪ್ರತಿದಿನ ಆಹಾರ  ಸಾಮಗ್ರಿ ವಿತರಣೆ ಮಾಡುತ್ತಿರುವ ಮಠಗಳಲ್ಲಿ ಶ್ರೀ ಮುರುಘಾಮಠ ಮೊದಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.ಕೊರೋನಾ  ಹಿನ್ನೆಲೆಯಲ್ಲಿ ಸರ್ಕಾರಕ್ಕೂ ಸಾಕಷ್ಟು ಆರ್ಥಿಕ ಸಮಸ್ಯೆಯಾಗಿದೆ. ಆದರೂ ಸರ್ಕಾರ ಅಗತ್ಯ  ಕ್ರಮಗಳನ್ನು ಕೈಗೊಳ್ಳುತ್ತಿದೆ. ಕರ್ನಾಟಕದಲ್ಲಿ ಈ ಸಮಸ್ಯೆಯನ್ನು ಆದಷ್ಟು ಬೇಗ  ಹೋಗಲಾಡಿಸಿ ಮತ್ತೆ ಸುಗಮ ಜೀವನ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ  ಎಂದು ಸಚಿವರು ತಿಳಿಸಿದರು.