ಮುಂಬೈ, ಅ 17: ಈ ತಿಂಗಳ 21 ರಂದು ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರ ನಡುವೆ ಮಾತಿನ ಸಮರವೇ ನಡೆಯುತ್ತಿದೆ.
ಈ ಬಾರಿ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ವೀರ್ ಸಾವರ್ಕರ್ ಗೆ ಭಾರತ ರತ್ನ ಪುರಸ್ಕಾರ ದೊರಕುವಂತೆ ಪ್ರಯತ್ನಿಸಲಾಗುವುದು ಎಂದು ಬಿಜೆಪಿ ನಾಯಕರು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.
ಬಿಜೆಪಿ ನೀಡಿರುವ ಈ ಭರವಸೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಪ್ರತಿಕ್ರಿಯಿಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹತ್ಯೆ ನಡೆಸಲು ಕೇವಲ ಸಂಚು ರೂಪಿಸಿದ ಆರೋಪ ಮಾತ್ರ ಸಾವರ್ಕರ್ ಅವರ ಮೇಲಿದೆ.... ಆದರೆ, ನಾಥೂರಾಂ ಗೋಡ್ಸೆ ಗಾಂಧಿ ಅವರನ್ನು ಬಲಿ ತೆಗೆದುಕೊಂಡ.. ಗಾಂಧಿಜೀ ಅವರ 150 ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಸಾವರ್ಕರ್ ಬದಲಿಗೆ ನಾಥುರಾಮ್ ಗೋಡ್ಸೆಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಕೊಡಬೇಕು ಎಂದು ಮನೀಷ್ ತಿವಾರಿ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಘೋಷಿಸಿರುವ ಪ್ರಣಾಳಿಕೆಯಲ್ಲಿ ಸಾವರ್ಕರ್ಗೆ ಭಾರತ ರತ್ನ ಪುರಸ್ಕಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂಬ ಭರವಸೆ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.